ಬೆಂಗಳೂರು:ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಸಿಬಿಐ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಡಿವೈಎಸ್‌ಪಿ ಯತಿರಾಜ್, ಇನ್ಸ್ಪೆಕ್ಟರ್ಗಳಾದ ಮಿರ್ಜಾ ಅಲಿ, ಸುಧಾಕರ್, ಮುರುಗೇಂದ್ರಪ್ಪ ಹಾಗೂ ಮಾಲ್ತೇಶ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದು, ಆರು ಜನ ಅಧಿಕಾರಿಗಳನ್ನು ಮುಖಾಮುಖಿ ಕೂರಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ನಂತರ ಅವರಿಂದ ಹೇಳಿಕೆ ಪಡೆದು ಸಂಜೆ ವೇಳೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಫೋನ್ ಕದ್ದಾಲಿಕೆ ಪ್ರಕರಣ: ಸಿಬಿಐ ತನಿಖಾಧಿಕಾರಿಗಳಿಂದ ಮುಂದುವರೆದ ತನಿಖೆ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಈ ಆರು ಮಂದಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಆ ಹಿನ್ನೆಲೆಯಲ್ಲಿ ಭಾನುವಾರ ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ.
ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಕೇಳಿ ಬಂದಿದ್ದ ಇನ್ಸ್ಪೆಕ್ಟರ್ ಮಿರ್ಜಾ ಅಲಿ, ಸಿಬಿಐ ಎಸ್‌ಪಿ ಕಿರಣ್ ಎದುರು ವಿಚಾರಣೆಗೆ ಹಾಜರಾಗಿದ್ದರು. ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅವರು, ಈ ವೇಳೆ ಕೆಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.