ನವದೆಹಲಿ/ಬೆಂಗಳೂರು:ಬೆಂಗಳೂರಿನ ಯುನಾನಿ ಔಷಧಗಳ ರಾಷ್ಟ್ರೀಯ ಸಂಸ್ಥೆ (National Institute of Unani Medicine - NIUM)ಯ ಆಡಳಿತ ಅಧಿಕಾರಿಯೊಬ್ಬರು 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಲೆಗೆ ಬಿದ್ದಿದ್ದಾರೆ. ಬಾಕಿ ಬಿಲ್‌ಗಳ ಬಿಡುಗಡೆಗೆ ಆಹಾರ ಪೂರೈಕೆದಾರರಿಂದ 1.10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಆಡಳಿತ ಅಧಿಕಾರಿ ನದೀಮ್ ಎ. ಸಿದ್ದಿಕಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಯುನಾನಿ ಆಸ್ಪತ್ರೆಯ ರೋಗಿಗಳಿಗೆ ಆಹಾರವನ್ನು ಕ್ಯಾಂಟೀನ್ವೊಂದು ಪೂರೈಸುತ್ತಿತ್ತು. ಇದರ ಬಿಲ್‌ಗಳನ್ನು ಯುನಾನಿ ಮೆಡಿಸಿನ್ ಸಂಸ್ಥೆಯು ಬ್ಯಾಂಕ್ ಖಾತೆಗೆ ಮಾಸಿಕ ಆಧಾರದ ಮೇಲೆ ಪಾವತಿಸುತ್ತದೆ. ಆದರೆ, ಎರಡು ತಿಂಗಳೊಳಗೆ ಇದರ ಗುತ್ತಿಗೆ ಅವಧಿ ಮುಗಿಯಲಿದ್ದು, ಎನ್‌ಐಯುಎಂನಲ್ಲಿ 3 ಲಕ್ಷ ರೂಪಾಯಿ ಮೊತ್ತದ ಎರಡು ತಿಂಗಳ ಬಿಲ್‌ಗಳು ಬಾಕಿ ಉಳಿದಿವೆ. ಬಾಕಿ ಇರುವ ಬಿಲ್‌ಗಳ ಬಿಡುಗಡೆಗೆ ಆಡಳಿತ ಅಧಿಕಾರಿ ಸಿದ್ದಿಕಿ ಕ್ಯಾಂಟೀಕ್ ಮಾಲೀಕರಿಗೆ 1.10 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ದೂರು ನೀಡಲಾಗಿತ್ತು.