ಕರ್ನಾಟಕ

karnataka

ETV Bharat / state

ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ: ತಡೆಯಾಜ್ಞೆ ತೆರವಿಗೆ ಸಿಬಿಐ ಮನವಿ - ಕೇಂದ್ರ ತನಿಖಾ ದಳ

ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದ ತನಿಖೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವಂತೆ ಹೈಕೋರ್ಟ್​ಗೆ ಸಿಬಿಐಗೆ ಮನವಿ ಸಲ್ಲಿಸಿದೆ.

DK Shivakumar
ಡಿ ಕೆ ಶಿವಕುಮಾರ್

By

Published : Feb 24, 2023, 8:15 PM IST

Updated : Feb 24, 2023, 8:20 PM IST

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಕೇಂದ್ರ ತನಿಖಾ ದಳ (ಸಿಬಿಐ) ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ. ಭ್ರಷ್ಟಾಚಾರ ಆರೋಪದಲ್ಲಿ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಕೋರಿ ಡಿಕೆಶಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ (ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ಪೀಠ)ಕ್ಕೆ ಈಗಾಗಲೇ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು. ಜೊತೆಗೆ, ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಮುಂದಾದರು. ತನಿಖೆಯ ಪ್ರಗತಿ ವರದಿಯನ್ನು ಸ್ವೀಕರಿಸದ ನ್ಯಾಯಪೀಠ, ತಡೆಯಾಜ್ಞೆ ತೆರವು ಕೋರಿರುವ ಮನವಿಯನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.

ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 19 (3) (ಸಿ) ಅನ್ನು 2018ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರನುಸಾರ ತನಿಖೆಯನ್ನು ಯಾವುದೇ ಕೋರ್ಟ್‌ ತಡೆಯುವಂತಿಲ್ಲ. ಆದ್ದರಿಂದ, ಹೈಕೋರ್ಟ್ ನೀಡಿರುವ ತಡೆ ಆದೇಶವನ್ನು ತೆರವುಗೊಳಿಸಬೇಕು. ಅಲ್ಲದೇ, ಅರ್ಜಿದಾರರು ಎಫ್‌ಐಆರ್‌ನಲ್ಲಿ ಕುಟುಂಬದ ಸದಸ್ಯರ ಹೆಸರುಗಳು ಇಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಕಲಂ 13 (ಎ) (ಇ) ಅನ್ವಯ ಕುಟುಂಬದ ಸದಸ್ಯರೂ ನಿಶ್ಚಿತವಾಗಿ ಈ ಕಾಯ್ದೆಯ ಅಡಿ ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ. ಮೇಲಾಗಿ ತನಿಖೆಯ ವ್ಯಾಪ್ತಿಯನ್ನು ಇಂತಿಷ್ಟೇ, ಹೀಗೇ ಇರಬೇಕು ಎಂಬುದನ್ನು ಆರೋಪಿ ತೀರ್ಮಾನಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ:ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ಸಿಬಿಐ ದಾಖಲಿಸಿರುವ ಈ ಎಫ್‌ಐಆರ್‌ ಕಾನೂನು ಬಾಹಿರವಾಗಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಡಿಕೆಶಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ 11ರಂದು ವಿಚಾರಣೆ ನಡೆಸಿ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಈ ತಡೆ ಆದೇಶವನ್ನು ತೆರವುಗೊಳಿಸುವಂತೆ ಕೋರಿ ಸಿಬಿಐ ಈ ಮನವಿ ಸಲ್ಲಿಸಿದೆ.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Last Updated : Feb 24, 2023, 8:20 PM IST

ABOUT THE AUTHOR

...view details