ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಬೆಂಗಳೂರು :ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ರೈತರ ಹಿತ ಕಾಯಲು ಪ್ರತಿಪಕ್ಷದ ಸದಸ್ಯನಾಗಿ ನಮ್ಮ ನಮ್ಮ ಕೆಲಸ ಮಾಡುತ್ತಿದ್ದೇನೆ. ಆದರೆ ಕಾಂಗ್ರೆಸ್‌ನವರೇ ಈ ವಿಚಾರವನ್ನು ರಾಜಕೀಯಗೊಳಿಸುವ ಯತ್ನ ನಡೆಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್.ಟಿ ನಗರದಲ್ಲಿರುವ ಖಾಸಗಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿವಾದ ಹೊಸದಲ್ಲ. ನ್ಯಾಯಾಧೀಕರಣದ ಆದೇಶವೂ ಆಗಿದೆ. ಯಾವ್ಯಾವ ರೈತರು ಬೆಳೆಯುವಂತಹ ಬೆಳೆಗಳಿಗೆ ಎಷ್ಟು ನೀರು ಬಿಡಬೇಕು ಅಂತ ತೀರ್ಮಾನ ಆಗಿದೆ. ತಮಿಳುನಾಡಿನ ಕುರುವೈ ಬೆಳಗೆ 1.80 ಲಕ್ಷ ಹೆಕ್ಟೇರ್‌ಗೆ 35 ಟಿಎಂಸಿ ನೀರು ಬೀಡಬೇಕು. ಈ ವರ್ಷ 4 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಬೆಳೆದಿದ್ದಾರೆ. 32 ಟಿಎಂಸಿ ನೀರು ಬದಲಿಗೆ 60 ಟಿಎಂಸಿ ನೀರು ಬಳಕೆಯಾಗಿದೆ. ಇದನ್ನು ನಮ್ಮ ಅಧಿಕಾರಿಗಳು ಪ್ರಶ್ನಿಸಬೇಕಿತ್ತು, ಪ್ರತಿಭಟನೆ ಮಾಡಬೇಕಾಗಿತ್ತು.
ಆದರೆ ಆ ಕೆಲಸ ಮಾಡಿಲ್ಲ. ಸರಕಾರ ಇದರ ಬಗ್ಗೆ ಕಾಳಜಿ ವಹಿಸಿಲ್ಲ. ನಮ್ಮ ರೈತರು ಕೇಳುತ್ತಿರುವುದು ನಮ್ಮ ರೈತರ ನೀರು. ನೀರು ಬಿಡುವುದಕ್ಕೆ ಸಮಯಕ್ಕೆ ಸರಿಯಾಗಿ ಸಭೆ ನಡೆಸಲಿಲ್ಲ. ವಿಳಂಬ ಮಾಡಿದರು, ಡ್ಯಾಮ್ನಲ್ಲಿ ನೀರು ಇರುವುದನ್ನು ಕಂಡು ತಮಿಳುನಾಡು ನೀರು ಕೇಳುತ್ತಿದೆ. ಅವರು ಕೇಳಿದ ತಕ್ಷಣ ಇವರು ಬಿಟ್ಟಿದ್ದಾರೆ.
ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಅನ್ಯಾಯ ಆಗುತ್ತಿದೆ. ಕುಡಿಯುವ ನೀರಿಗೆ ಬೆಂಗಳೂರು ಮತ್ತು ಇತರ ಕಾವೇರಿ ಜಲಾನಯನ ವ್ಯಾಪ್ತಿಯ ಜನಗಳು ಇತರ ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಮಳೆ ಕಡಿಮೆಯಾಗಿ ನೀರಿನ ಒಳ ಹರಿವು ಕಡಿಮೆಯಾಗಿದೆ. ಇಷ್ಟೆಲ್ಲ ಗೊತ್ತಿದ್ದರೂ 10 ಟಿಎಂಸಿ ನೀರು ಬಿಡುತ್ತೇವೆ ಎಂದು ರಾಜ್ಯ ಸರಕಾರ ಹೇಳುತ್ತಿದೆ ಎಂದು ಸರ್ಕಾರದ ನಡೆಗೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು.
ಸಿಎಂ, ಡಿಸಿಎಂ ವಿರುದ್ದ ವಾಗ್ದಾಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನೀರು ಬಿಡಲ್ಲ ಅಂತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ನೋಡಿದರೆ ನೀರು ಬಿಡುವ ಬೀಗ ನನ್ನ ಕೈಯಲ್ಲಿ ಇಲ್ಲ ಎನ್ನುತ್ತಾರೆ. ಲಿಗಲ್ ಅಡ್ವೈಸರ್ ಏನು ಹೇಳುತ್ತಾರೋ ಹಾಗೆ ಕೇಳುತ್ತೇವೆ ಅಂತಾರೆ. ಸರಕಾರವಾಗಿ ಲೀಗಲ್ ಆಗಿ ಹೇಳಬೇಕು. ಕೋರ್ಟ್ನಲ್ಲಿ ಕಾವೇರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ಅದಕ್ಕೆ ತಕ್ಕುದಾದ ವಾದ ಮಾಡಬೇಕು. ಅದನ್ನು ಬಿಟ್ಟು ರೈತರಿಗೇ ಕೋರ್ಟ್ಗೆ ಹೋಗಿ ಎನ್ನುತ್ತಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ. ರೈತರು ಕೋರ್ಟ್ಗೆ ಹೋಗುವುದಾದರೇ ನೀವೇಕೆ ಇದ್ದೀರಿ?. ಜನರು ನಿಮ್ಮನ್ನೇಕೆ ಆರಿಸಿದ್ದಾರೆ? ನಮಗೆ ರಾಜಕಾರಣ ಮಾಡುತ್ತಿದ್ದೀರಾ ಅಂತ ಹೇಳಿದ್ದಾರೆ. ನಾವು ರಾಜಕಾರಣ ಮಾಡುತ್ತಿಲ್ಲ. ರೈತರ ಹಿತ ಕಾಯಲು ಪ್ರತಿಪಕ್ಷದ ಸದಸ್ಯನಾಗಿ ನಮ್ಮ ನಮ್ಮ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಈ ವಿಚಾರ ರಾಜಕೀಯಗೊಳಿಸುವ ಯತ್ನ ನಡೆಸಿದ್ದಾರೆ. ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಹಿತ ಕಾಯಲು ನಾವು ರೈತರೊಂದಿಗೆ ಇದ್ದೇವೆ ಎಂದರು.
ಕೆಲವು ಗುತ್ತಿಗೆದಾರರು ನಮ್ಮ ಬಳಿ ಬಂದು ಹಣ ಬಿಡುಗಡೆಗೆ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಅವರ ಮೇಲೆ ಏನು ಒತ್ತಡ ಇದೆಯೋ ಗೊತ್ತಿಲ್ಲ. ಅವರು ಈಗ ಆ ಥರ ಇಲ್ಲ ಅಂತ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಗುತ್ತಿಗೆದಾರರೇ ಎಲ್ಲವನ್ನೂ ಹೇಳಬೇಕು. ಯಾಕೆ ಆರೋಪ ಮಾಡಿದರು? ಯಾಕೆ ಆರೋಪದಿಂದ ಹಿಂದೆ ಸರಿದರು? ಎಂದು ಅವರೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಹೋಗುತ್ತಾರೆ ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಮೇಲೆ ಕಮಿಷನ್ ಆರೋಪ ಕೇಳಿ ಬಂದಿರುವುದರಿಂದ ಅದನ್ನು ಡೈವರ್ಟ್ ಮಾಡಲು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಯಶವಂತಪುರದಲ್ಲಿ ಸ್ಥಳೀಯವಾಗಿ ಕೆಲವು ಸಮಸ್ಯೆ ಇರುವ ಬಗ್ಗೆ ಶಾಸಕ ಎಸ್.ಟಿ.ಸೋಮಶೇಖರ್ ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಹರಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ :ರಾಜಕಾರಣ ಎಷ್ಟು ಮಾಡಬೇಕೋ ಅಷ್ಟೇ ಮಾಡಬೇಕು, ನೀರು ಹರಿಸುವ ಬೀಗ ನಮ್ಮ ಬಳಿ ಇದೆಯೇ?: ಡಿಸಿಎಂ ಡಿಕೆಶಿ