ಬೆಂಗಳೂರು: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ಮುಖಂಡರು, (ಕೇಂದ್ರ ಸರ್ಕಾರದ ಸಚಿವರು) ಹಾಗೂ ಸಂಸತ್ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ವಿಶೇಷ ತುರ್ತು ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಭೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿದೆ.
ಸರ್ವಪಕ್ಷ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?: ನಿನ್ನೆ ಸಂಜೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMC) ಆದೇಶ ಬಂದ ಹಿನ್ನೆಲೆ ಇಂದಿನ ಈ ತುರ್ತುಸಭೆ ಕರೆಯಲಾಗಿದೆ. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಜಲವರ್ಷದಲ್ಲಿನ ಪರಿಸ್ಥಿತಿ ಬಗ್ಗೆ ಈ ಹಿಂದೆ 28.08.2023ರಂದು ಸರ್ವಪಕ್ಷಗಳ ಮುಖಂಡರುಗಳ ಸಭೆಯನ್ನು ಕರೆಯಲಾಗಿತ್ತು. 12.09.2023 ರಂದು ಅಂದರೆ ನಿನ್ನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWRC) 86ನೇ ಸಭೆಯು ಜರುಗಿದ್ದು, ಸದರಿ ಸಭೆಯಲ್ಲಿ 13.09.2023 ರಿಂದ ಮುಂದಿನ 15 ದಿನಗಳವರೆಗೆ ಕರ್ನಾಟಕ ರಾಜ್ಯವು ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 5,000 ಕ್ಯೂಸೆಕ್ ನೀರಿನ ಪ್ರಮಾಣವನ್ನು ಖಚಿತ ಪಡಿಸುವಂತೆ ನಿರ್ಣಯಿಸಿದೆ. ಸದರಿ ವಿಷಯವು ರಾಜ್ಯದ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಅತೀ ಗಂಭೀರವಾಗಿರುವ ಹಿನ್ನೆಲೆ ಅತೀ ತುರ್ತಾಗಿ ಈ ದಿನ short noticeನಲ್ಲಿ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕಡಿಮೆಯಿದ್ದು, ಮೇ-2024ರ ವರೆಗೆ ನಮ್ಮ ನೀರಾವರಿ, ಕುಡಿಯುವ ನೀರು ಹಾಗೂ ಇತರೆ ಅಗತ್ಯತೆಗಳಿಗೆ ನೀರನ್ನು ಪೂರೈಸಬೇಕಾಗಿದೆ. ಈಗಾಗಲೇ South-West Monsoon ಮುಗಿಯುವ ಹಂತದಲ್ಲಿದ್ದು, ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣವು ಕ್ಷೀಣಿಸುತ್ತಿದೆ. ಈಗಿನ ಸಂಗ್ರಹಣೆಯನ್ನು ನಮ್ಮ ಅಗತ್ಯತೆಗಳಿಗೆ ಕಾಯ್ದಿರಿಸಬೇಕಾಗಿದೆ. ರಾಜ್ಯದ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನ ಮಾಡಲು ದೆಹಲಿ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿದಾಗ ರಾಜ್ಯದ ಪರಿಸ್ಥಿತಿ ವಿವರಿಸಿದ್ದಾರೆ. ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನ ಮಂತ್ರಿಗಳ ಸಮಯ ಕೇಳಲಾಗಿದೆ. ಈ ಮಧ್ಯೆ, ತಮಿಳುನಾಡು ರಾಜ್ಯವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾವೆ ಮತ್ತು ರಾಜ್ಯವು ಸಲ್ಲಿಸಿರುವ ಪ್ರತಿಕ್ರಿಯೆಗಳ ವಿಚಾರಣೆಯು ದಿನಾಂಕ 21.09.2023 ರಂದು ನಿಗದಿಯಾಗಿರುತ್ತದೆ ಎಂದು ಹೇಳಿದರು.
ರಾಜ್ಯದ ಕಾವೇರಿ ಜಲಾನಯನದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಬೆಳೆಗಳಿಗೆ ನೀರಾವರಿಗಾಗಿ 70.20 TMC, ಸೆಪ್ಟೆಂಬರ್ 2023 ರಿಂದ ಜುಲೈ 2024 ರ ವರೆಗೆ ಕುಡಿಯುವ ನೀರಿಗೆ 33 TMC ಮತ್ತು ಕೈಗಾರಿಕಾ ಬಳಕೆಗಾಗಿ 3 TMC, ಹೀಗೆ ಒಟ್ಟು 106.20 TMC ನೀರಿನ ಪ್ರಮಾಣದ ಅವಶ್ಯಕವಿರುತ್ತದೆ. ಆದರೆ, ನಮ್ಮ ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿನ ಇಂದಿನ ಒಟ್ಟಾರೆ ನೀರಿನ ಮಟ್ಟ 53.287 ಟಿಎಂಸಿ ಇದ್ದು, ಹಿಂದಿನ ವರ್ಷ ಇದೇ ದಿನದಂದು ನೀರಿನ ಮಟ್ಟ 103.348 ಟಿಎಂಸಿ ಆಗಿತ್ತು. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದಲ್ಲಿ ನೀರಿನ ಒಳಹರಿವಿನಲ್ಲಿ ಒಟ್ಟಾರೆ ಕೊರತೆ 54% ಆಗಿರುತ್ತದೆ ಎಂದರು.