ಬೆಂಗಳೂರು:ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ರಾಜ್ಯದ ಜೀವನದಿ ಕಾವೇರಿ ಬರಡಾಗುತ್ತಿದೆ. ಕಾವೇರಿಯಲ್ಲಿ ಸದ್ಯಕ್ಕೆ ಇರುವ ಅಲ್ಪಸ್ವಲ್ಪನೀರನ್ನಾದರೂ ಉಳಿಸಿಕೊಳ್ಳಲು ಇಂದು ಕನ್ನಡಿಗರ ಮತ್ತೊಂದು ಸುತ್ತಿನ ಹೋರಾಟ ನಡೆಸುತ್ತಿದ್ದಾರೆ. ಎರಡು ಬಂದ್ ಬೆನ್ನಲ್ಲೇ ಸರ್ಕಾರಕ್ಕೆ ಇದೀಗ ಮತ್ತೊಂದು ತಲೆನೋವು ಎದುರಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಇಂದು ಕೆ. ಆರ್. ಎಸ್ ಡ್ಯಾಂ ಮುತ್ತಿಗೆ ಹಾಕುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಬೃಹತ್ ರ್ಯಾಲಿ ಮೂಲಕ ಕನ್ನಡಪರ ಸಂಘಟನೆಗಳು ಕೆ. ಆರ್. ಎಸ್ ಡ್ಯಾಂನತ್ತ ಸಾಗಿವೆ. ಮಧ್ಯಾಹ್ನ 12:45ಕ್ಕೆ ಬೆಂಳೂರಿನಿಂದ ವಾಟಾಳ್ ನಾಗರಾಜ್ ನೇತೃತ್ವದದ ರ್ಯಾಲಿ ಆರಂಭವಾಗಿದೆ.
ಈ ಬೃಹತ್ ರ್ಯಾಲಿಯಲ್ಲಿ ನೂರಾರು ವಾಹನಗಳು ಭಾಗಿಯಾಗಿವೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಮುತ್ತಿಗೆ ಮೂಲಕ ಸರ್ಕಾರ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಲು ಸಂಘಟನೆಗಳು ಮುಂದಾಗಿವೆ.
ರ್ಯಾಲಿಯೂ ಮೈಸೂರು ಬ್ಯಾಂಕ್ ಸರ್ಕಲ್ ಮೂಲಕ ಆರಂಭಗೊಂಡಿದ್ದು, ಕೆಜಿ ರೋಡ್, ಶಾಂತಲಾ ಸಿಲ್ಕ್ ಹೌಸ್ , ಕಾಟನ್ ಪೇಟೆ ಮುಖ್ಯ ರಸ್ತೆ, ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಬಿಎಚ್ಇಎಲ್, ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಜಂಕ್ಷನ್, ಕೆಂಗೇರಿ, ವಿಶ್ವ ಒಕ್ಕಲಿಗರ ಸಂಘ, ಆರ್ ಆರ್ ಡೆಂಟಲ್ ಕಾಲೇಜು, ಕುಂಬಳಗೋಡು, ಬಿಡದಿ ಮೂಲಕ ರಾಮನಗರದ ಐಜೂರು ಗೇಟ್ ಬಳಿಗೆ ತಲುಪಲಿದೆ. ಅಲ್ಲಿ ಕೂಡ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ಮಂಡ್ಯದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ, ಶ್ರೀರಂಗಪಟ್ಟಣ, ಪಂಪ್ ಹೌಸ್ ಮೂಲಕ ಕೆಆರ್ ಎಸ್ ಡ್ಯಾಂಗೆ ತರಳಿ ಮುತ್ತಿಗೆ ಹಾಕಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹೋರಾಟಗಾರ ಸಾ ರಾ ಗೋವಿಂದು, ನಮ್ಮ ಹೋರಾಟ ನಿರಂತರವಾಗಿರಲಿದೆ. ಕೆಆರ್ಎಸ್ಗೆ ಹೋಗಿ ಅಲ್ಲಿನ ಹೋರಾಟಗಾರರಿಗೆ ಬೆಂಬಲ ಕೊಡಲಿದ್ದೇವೆ. ನಮ್ಮ ರ್ಯಾಲಿಗೆ ಅವಕಾಶ ಮಾಡಿಕೊಡಬೇಕು. ಪ್ರತಿಭಟನೆ ಮಾಡುವುದು ನಮ್ಮ ಹಕ್ಕಾಗಿದೆ. ದೇಶದ ಪ್ರಧಾನಿ ಮೋದಿ ಕರ್ನಾಟಕದ ಜನರನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿರುವ ಅಧಿಕಾರಿಗಳನ್ನು ಬಳಸಿಕೊಂಡು ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ಬಿಜೆಪಿಯಲ್ಲಿರುವ ರಾಜ್ಯದ ಸಂಸದರು ಈ ಬಗ್ಗೆ ಮಾತನಾಡದೇ ಏನು ಮಾಡುತ್ತಿದ್ದಾರೆ? ಪ್ರಧಾನಿ ಮೋದಿ ಮೇಲೆ ಒತ್ತಡ ಹೇರಲು ಇವರಿಗೆ ಆಗುವುದಿಲ್ಲವ? ಎಂದು ಸಾ ರಾ ಗೋವಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ಯಮ, ಚಿತ್ರಗುಪ್ತನ ವೇಷ ಧರಿಸಿ ಪ್ರತಿಭಟನೆ; ವರುಣ ಕೃಪೆಗೆ ಕಾವೇರಿ ಮಾತೆಗೆ ಪೂಜೆ