ಬೆಂಗಳೂರು :ಕಾವೇರಿ ನದಿ ನೀರು ಹಂಚಿಕೆ ವಿವಾದ, ಕೇಂದ್ರ ಸರ್ಕಾರದ ಮುಂದೆ ಬಾಕಿಯಿರುವ ರಾಜ್ಯದ ಯೋಜನೆಗಳು ಹಾಗೂ ಬರ ಪರಿಹಾರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಯ ಖಾಸಗಿ ಹೋಟೆಲ್ ನಲ್ಲಿ ನಾಳೆ ಬೆಳಗ್ಗೆ ಮಹತ್ವದ ಸರ್ವ ಪಕ್ಷ ಸಭೆ ನಡೆಯಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಕಾವೇರಿ ವಿವಾದ, ಬರ ಪರಿಹಾರ ಸಂಬಂಧ ಕೇಂದ್ರ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರುಗಳು, ಲೋಕಸಭಾ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸಂಜೆಯೇ ನವದೆಹಲಿಗೆ ತೆರಳಲಿದ್ದಾರೆ.
ಕರ್ನಾಟಕದ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು, ನಾಳೆ ನಡೆಯಲಿರುವ ಮಹತ್ವದ ಸಭೆಗೆ ಕರ್ನಾಟಕ ಭವನದಲ್ಲಿ ಪೂರ್ವಭಾವಿ ಚರ್ಚೆ ಮಾಡುತ್ತಿದ್ದಾರೆ. ಈಗಾಗಲೇ ಕಾವೇರಿ ವಿವಾದ ಸಂಬಂಧ ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಲಾಗಿದ್ದು, ಅವಕಾಶ ಸಿಕ್ಕರೆ ನಾಳೆ ಪ್ರಧಾನಿ ಮೋದಿ ಭೇಟಿಯಾಗುವ ಸಾಧ್ಯತೆ ಇದೆ. ಆದರೆ, ಕಾವೇರಿ ವಿವಾದ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿರುವ ಹಿನ್ನೆಲೆ ಪ್ರಧಾನಿ ಮಧ್ಯಪ್ರವೇಶ ಮಾಡುವುದು ಅನುಮಾನವಾಗಿದೆ.