ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ರೈತಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಇಂದು ಕರೆ ಕೊಟ್ಟಿರುವ ಬೆಂಗಳೂರು ಬಂದ್‌ಗೆ ರಾಜ್ಯ ರಾಜಧಾನಿ ಬಹುತೇಕ ಸ್ತಬ್ಧವಾಗಲಿದೆ. ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬೆಂಗಳೂರು ಬಂದ್ ಆಗಲಿದ್ದು, ಸಾರ್ವಜನಿಕರು ಮನೆಯಿಂದರ ಹೊರಬರುವ ಮುನ್ನ ನಗರದಲ್ಲಿ ಇಂದು ಏನೆಲ್ಲಾ ಲಭ್ಯ, ಅಲಭ್ಯ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇಂದು ಶಾಲಾ-ಕಾಲೇಜುಗಳಿಗೂ ರಜೆ ಇರಲಿದ್ದು, ಆಟೋ ಟ್ಯಾಕ್ಸಿ ಸೇರಿ ಖಾಸಗಿ ಸಾರಿಗೆ ಸಂಚಾರ, ಪೆಟ್ರೋಲ್ ಬಂಕ್, ಹೋಟೆಲ್ ಅಂಗಡಿ ಮುಂಗಟ್ಟುಗಳು ಹಾಗೂ ಕೆ.ಆರ್.ಮಾರುಕಟ್ಟೆ ಬಂದ್ ಇರಲಿದೆ.
ಏನ್ ಇರುತ್ತೆ?: ಬೀದಿಬದಿ ವ್ಯಾಪಾರ, ಸರ್ಕಾರಿ ಕಚೇರಿ, ಸರ್ಕಾರಿ ಸಾರಿಗೆ, ನಮ್ಮ ಮೆಟ್ರೋ, ಖಾಸಗಿ ಕಚೇರಿ, ಆಸ್ಪತ್ರೆ, ಔಷಧ ಅಂಗಡಿಗಳು, ಆಂಬ್ಯುಲೆನ್ಸ್, ಹಾಲು ಮತ್ತು ಅಗತ್ಯ ಸೇವೆಗಳು ದೊರೆಯಲಿವೆ.
ಏನ್ ಇರಲ್ಲ?: ಆಟೋ, ಟ್ಯಾಕ್ಸಿ, ಓಲಾ, ಊಬರ್ ಸೇರಿ ಖಾಸಗಿ ಸಾರಿಗೆ ಸಂಚಾರ, ಪೆಟ್ರೋಲ್ ಬಂಕ್, ಶಾಲಾ-ಕಾಲೇಜು, ಕೈಗಾರಿಕೆಗಳು, ವಾಣಿಜ್ಯೋದ್ಯಮ, ಅಂಗಡಿ ಮುಂಗಟ್ಟುಗಳು, ಕೆ.ಆರ್.ಮಾರುಕಟ್ಟೆ ಬಂದ್ ಇರಲಿದೆ.
ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಮೆರವಣಿಗೆ: ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ಬೆಳಗ್ಗೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿವೆ. ಬೆಂಗಳೂರು ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಜೊತೆಗೆ ಬಿಜೆಪಿ, ಜನತಾ ದಳ ಹಾಗೂ ಆಮ್ ಆದ್ಮಿ ಪಕ್ಷ ಕೂಡ ಬೆಂಬಲ ಘೋಷಿಸಿವೆ.
ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸುವುದರಿಂದ ಆರಂಭದಲ್ಲಿಯೇ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜನರ ಗುಂಪು ಸೇರುವಂತಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದ್ದು, ಕರೆದೊಯ್ಯಲು ಹತ್ತು ಬಿಎಂಟಿಸಿ ಬಸ್‌ಗಳನ್ನ ಈಗಾಗಲೇ ಕಾಯ್ದಿರಿಸಲಾಗಿದೆ. ಟೌನ್ ಹಾಲ್ ಬಳಿ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದಾರೆ.
ಪೊಲೀಸ್ ಬಂದೋಬಸ್ತ್:ಬೆಂಗಳೂರು ಬಂದ್ ಹಾಗೂ ನಗರದಾದ್ಯಂತ ನಿಷೇಧಾಜ್ಞೆ ಜಾರಿ ಇರುವ ಹಿನ್ನೆಯಲ್ಲಿ ರಾತ್ರಿಯಿಂದಲೇ ಪೊಲೀಸರು ಬಂದೋಬಸ್ತ್ ನಲ್ಲಿ ನಿರತರಾಗಿದ್ದಾರೆ. ಹೆಚ್ಚು ಐಟಿ ಬಿಟಿ ಕಂಪನಿಗಳಿರುವ ವೈಟ್ಫೀಲ್ಡ್, ಮಹದೇಪುರ, ಟಿ.ಸಿ.ಪಾಳ್ಯ, ಮಾರತ್ ಹಳ್ಳಿ, ಕುಂದಲಹಳ್ಳಿ ಸೇರಿದಂತೆ ವಿವಿಧೆಡೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಲಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಎಂ.ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.