ಬೆಂಗಳೂರು :ಈಶ ಫೌಂಡೇಷನ್‌ನ ‘ಕಾವೇರಿ ಕೂಗು’ ಅಭಿಯಾನದ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆ ಆಗಲಿದೆ ಎಂದು ಖಾಸಗಿ ಚಾನೆಲ್ಗೆ ಬೆದರಿಕೆ ರೀತಿಯಲ್ಲಿ ನೋಟಿಸ್ ನೀಡಿದ್ದ ವಕೀಲರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.
ಕಾವೇರಿ ಕೂಗು ಅಭಿಯಾನದ ಹೆಸರಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಸಂಗ್ರಹಿಸಲಾಗುತ್ತಿದೆ ಎಂದು ಆಕ್ಷೇಪಿಸಿ ವಕೀಲ ಎ.ವಿ. ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಚಾನೆಲ್ಗೆ ನೋಟಿಸ್ ನೀಡಿದ್ದ ಕ್ರಮ ಸಮರ್ಥಿಸಿಕೊಂಡ ಅರ್ಜಿದಾರ ವಕೀಲರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕಾರ್ಯಕ್ರಮ ಪ್ರಸಾರವಾದರೆ ಅದು ನ್ಯಾಯಾಂಗ ನಿಂದನೆ ಹೇಗಾಗುತ್ತದೆ? ನೀವು ಹೇಗೆ ಈ ನಿರ್ಣಯ ಕೈಗೊಂಡಿರಿ? ಯಾವ ಆಧಾರದಲ್ಲಿ ಇಂತಹ ನೋಟಿಸ್ ನೀಡಿದ್ದೀರಿ? ಈ ಕುರಿತ ಸ್ಪಷ್ಟನೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.