ಬೆಂಗಳೂರು:ರಾಜ್ಯದ ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದೆ. ಆದರೂ ವಿರೋಧ ಪಕ್ಷಗಳು ಕಾವೇರಿ ಸಮಸ್ಯೆಗೆ ರಾಜಕೀಯ ಆಯಾಮ ನೀಡುತ್ತಿವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಸದಾಶಿವನಗರ ನಿವಾಸ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾರೊಬ್ಬರೂ ಕಾನೂನು ಕೈಗೆ ಎತ್ತಿಕೊಳ್ಳಬಾರದು. ನಾವು ನಮ್ಮ ರಾಜ್ಯದ ಹಿತ ಕಾಯುತ್ತಿದ್ದೇವೆ. ಹೋರಾಟ ಮಾಡಬಾರದು ಎಂದು ನಾವು ಹೇಳುವುದಿಲ್ಲ. ರೈತ ಸಂಘಟನೆ, ಕನ್ನಡ ಸಂಘಟನೆಗಳು, ಚಿತ್ರರಂಗ, ವಿರೋಧ ಪಕ್ಷಗಳ ಹೋರಾಟಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ತಿಳಿಸಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಿಮ್ಮ ಜೊತೆ ನಿಲ್ಲಬೇಕಿತ್ತಲ್ಲವೆ ಎಂದು ಕೇಳಿದಾಗ, ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವರು ಹೊಸ ಹುರುಪಿನಲ್ಲಿ ಅವರದೇ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರು ನೀರಿನಲ್ಲಿ ರಾಜಕಾರಣ ಮಾಡಿದರೆ, ನಾವು ರೈತರನ್ನು ಕಾಪಾಡುತ್ತಿದ್ದೇವೆ. ರಾಜ್ಯದ ಹಿರಿಯ ನಾಯಕರಾದ ದೇವೇಗೌಡರು ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದು ಯಾವ ಸಲಹೆ ಕೊಟ್ಟಿದ್ದಾರೆ ಎಂದು ನೀವೇ ಹೇಳಿ. ನಾನು ಏನಾದರೂ ಹೇಳಿದರೆ ಅದು ರಾಜಕಾರಣ ಆಗುತ್ತದೆ. ನೀವು ಈ ಸಂದರ್ಶನ, ಅದರಲ್ಲಿ ದೇವೇಗೌಡರು ಏನು ಹೇಳಿದ್ದಾರೆ ಎಂಬುದನ್ನು ನೋಡಿದರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎಂದು ತಿಳಿಸಿದರು.
ಕಾವೇರಿ ಕರ್ನಾಟಕದ ಆಸ್ತಿ ಅಲ್ಲ ಎಂಬ ಡಿಎಂಕೆ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ಹೌದು.., ಕಾವೇರಿ ಇಡೀ ದಕ್ಷಿಣ ಭಾರತದ ಆಸ್ತಿ ಎಂದ ಅವರು, ಕುಮಾರಸ್ವಾಮಿ ಅವರು ಕಾವೇರಿ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಹೇಳಿರುವ ಬಗ್ಗೆ ವರದಿ ಬಂದಿದೆ. ಅವರು ಏನು ಚರ್ಚೆ ಮಾಡಿದ್ದಾರೆ, ಅವರ ನುಡಿಮುತ್ತು ಏನು ಎಂದು ಹೇಳಿದರೆ ನಾವು ಕೇಳುತ್ತೇವೆ ಎಂದರು.