ಬೆಂಗಳೂರು :ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ರೈತರ ನಿಯೋಗ ಗುರುವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅರನ್ನು ಭೇಟಿಯಾಗಿ, ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ, ರಾಜ್ಯದ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿತು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ಅವರ ನೇತೃತ್ವದ ರೈತ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಒಳ ಹರಿವು ಕಡಿಮೆ ಇದೆ. ಕುಡಿಯುವ ನೀರಿಗೆ ಕೊರತೆ ಇದೆ. ತಮಿಳುನಾಡಿಗೆ ನೀರು ಹರಿಸಿದರೆ ಸಮಸ್ಯೆ ಆಗಲಿದೆ. ಬೆಳೆಯುತ್ತಿರುವ ಫಸಲು ಉಳಿಸಲು ಕಷ್ಟ ಆಗುತ್ತದೆ. ಕಾವೇರಿ ನದಿಯಲ್ಲಿ ನೀರು ಕಡಿಮೆ ಇದ್ದು, ಕುಡಿಯುವ ನೀರಿಗೂ ಸಾಕಷ್ಟು ಕಷ್ಟ ಆಗುತ್ತಿದೆ. ಕಾವೇರಿ ನದಿ ನೀರನ್ನು ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದೇವೆ. ತಮಿಳುನಾಡಿಗೆ ನೀರು ಹರಿಸಿದರೆ ಕುಡಿಯಲು ನೀರಿಲ್ಲದೇ ಪರದಾಟ ನಡೆಸಬೇಕಾಗುತ್ತದೆ ಎಂದರು.
ಸೆ.11ರವರೆಗೆ 5000 ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಸರ್ಕಾರ ಹೇಳಿದೆ. ಕಾವೇರಿ ವಿವಾದದ ಕುರಿತಾಗಿ ಸಂಕಷ್ಟ ಸೂತ್ರವನ್ನು ಸರಿಯಾಗಿ ಜಾರಿಗೆ ತರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ದೊಡ್ಡಣ್ಣನ ಪಾತ್ರವನ್ನು ಕೇಂದ್ರ ಸರ್ಕಾರ ಮಾಡಬೇಕು. ಎರಡು ರಾಜ್ಯಗಳನ್ನು ಕರೆದು ಸಂಕಷ್ಟ ಸೂತ್ರವನ್ನು ಕೇಂದ್ರ ಮಾಡಬೇಕು ಎಂದು ನಾಗೇಂದ್ರ ಆಗ್ರಹಿಸಿದರು.
ಸೆ.11ಕ್ಕೆ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ :ರೈತರ ಹಿತದೃಷ್ಟಿಯಿಂದ ಕೂಡಲೇ ನೀರು ಬಿಡುವುದು ನಿಲ್ಲಿಸಿ. ಈಗಾಗಲೇ ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಸೆ. 11 ನೇ ತಾರೀಖು ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಜನ ಜಾನುವಾರುಗಳ ಜೊತೆಗೆ ಬೃಹತ್ ಪ್ರತಿಭಟನೆಗೆ ಇಳಿಯುತ್ತೇವೆ. ಈಗಾಗಲೇ ಅಹೋರಾತ್ರಿ ಧರಣಿ ಮಾಡ್ತಿದ್ದೇವೆ. ನಾಳೆಯಿಂದ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ಶುರುಮಾಡುತ್ತೇವೆ. ಸೆ.11 ರಂದು ಬೃಹತ್ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದರು.