ಬೆಂಗಳೂರು: ಕಾವೇರಿ ನೀರಿನ ವಿಚಾರವೂ ಸೇರಿ ವಿವಿಧ ರಂಗಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಬಿಜೆಪಿ ವತಿಯಿಂದ ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಕೆ.ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ, ಶಾಸಕರು, ವಿಧಾನಪರಿಷತ್ ಸದಸ್ಯರು, ಮಹಾನಗರ ಜಿಲ್ಲೆಗಳ ಅಧ್ಯಕ್ಷರು, ನಗರಪಾಲಿಕೆ ಮಾಜಿ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಕಾವೇರಿ ನೀರು, ಬರ ನಿರ್ವಹಣೆಗಳಲ್ಲಿ ವೈಫಲ್ಯ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಬಿಜೆಪಿ ಪ್ರತಿಭಟನೆ ಹಿನ್ನೆಲೆ ಮೈಸೂರು ಬ್ಯಾಂಕ್ ವೃತ್ತದ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಿಜೆಪಿ ನಾಯಕರ ವಶ:ರಸ್ತೆ ತಡೆ ಮಾಡಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಗೋಪಾಲಯ್ಯ ಮತ್ತಿತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಇದಕ್ಕೂ ಮುನ್ನ ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ ಅವರು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಖಜಾನೆ ಖಾಲಿ ಮಾಡಿದ್ರು. ತಮಿಳುನಾಡಿಗೆ ನೀರು ಕೊಟ್ಟು ಡಿಎಂಕೆ ಪಕ್ಷದ ಹಿತ ಕಾಯ್ತಿದ್ದಾರೆ ವಿನಹ, ಡೋಂಘಿ ರಾಜಕಾರಣ ಮಾಡ್ಕೊಂಡು ರಾಜ್ಯದ ಹಿತ ಕಾದಿಲ್ಲ. ಸ್ವಾತಂತ್ರ್ಯ ಬಂದ ನಂತರ ಇಂತಹ ಕೆಟ್ಟ ಸರ್ಕಾರ, ಭ್ರಷ್ಟ ಸರ್ಕಾರವನ್ನು ಎಲ್ಲಿಯೂ ನೋಡಿಲ್ಲ ಎಂದು ಕಿಡಿಕಾರಿದರು.