ತಮಿಳುನಾಡಿಗೆ ಕಾವೇರಿ ನೀರು: ಬೆಂಗಳೂರಿನಲ್ಲಿ ಪ್ರತಿಭಟನೆ.. ಬೆಂಗಳೂರು/ಶಿವಮೊಗ್ಗ:ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆ ಇಂದು ಕುರುಬರಹಳ್ಳಿ ಚಾಲುಕ್ಯ ವೃತ್ತದಲ್ಲಿ ಡಾ. ರಾಜಕುಮಾರ್ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜೊತೆಗೂಡಿ ನೂರಾರು ಕಾರ್ಯಕರ್ತರು ಕಾವೇರಿ ನದಿ ನೀರು ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ಕೆ.ಗೋಪಾಲಯ್ಯ ''ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನೆಡೆಯುಂಟಾಗಲು ಕಾರಣವಾಗಿದೆ. ಘನ ನ್ಯಾಯಾಲಯ ಮತ್ತೊಮ್ಮೆ ವಾಸ್ತವಾಂಶ ಪರಿಶೀಲನೆ ಮಾಡಬೇಕು'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜತೆಗೆ, ''ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮರ್ಥ ರೀತಿಯಲ್ಲಿ ವಾದ ಮಂಡಿಸಬೇಕು'' ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸ್ಥಳೀಯ ಮುಖಂಡರುಗಳಾದ ಎನ್. ಜಯರಾಂ, ವೆಂಕಟೇಶ್ ಮೂರ್ತಿ, ನಾರಾಯಣ, ಶಿವಾನಂದ್ ಮೂರ್ತಿ, ರಘು ನಾಗರಾಜ್, ರಕ್ಷಣಾ ವೇದಿಕೆ ಮುಖಂಡರಾದ ಚಾಲುಕ್ಯ ರಮೇಶ, ಪುರುಷೋತ್ತಮ್ ಹಾಗೂ ಪುನೀತ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.
ಕಾವೇರಿ ಹೋರಾಟಕ್ಕೆ ಪೂರ್ಣ ಬೆಂಬಲ:ಕಾವೇರಿ ನದಿ ನೀರು ಹೋರಾಟಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಹಾಗೂ ಪಾಲಿಕೆ ನೌಕರರ ಕನ್ನಡ ಸಂಘ ಸಂಪೂರ್ಣ ಬೆಂಬಲ ನೀಡಿವೆ. ಈ ಕುರಿತು ರಾಜ್ಯಾಧ್ಯಕ್ಷ ಅಮೃತ್ ರಾಜ್ ಮಾತನಾಡಿ, "ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿದೆ" ಎಂದರು.
''ಕೆಆರ್ಎಸ್ನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಕಾವೇರಿ ಕೊಳದ ರೈತರ ಬೆಳೆಗೆ ನೀರಿಲ್ಲ. ಜತೆಗೆ ಬೆಂಗಳೂರು ನಗರದಲ್ಲಿ 1 ಕೋಟಿ 30 ಲಕ್ಷ ಜನರು ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನು ನಂಬಿದ್ದಾರೆ. ಇನ್ನೂ ರಾಜ್ಯದ ಜನತೆಗೆ ಕುಡಿಯುವ ನೀರಿನ ಅಭಾವ ಇದ್ದು, ಕೆಆರ್ಎಸ್ನಲ್ಲಿ ನೀರಿಲ್ಲದೆ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಕರ್ನಾಟಕ ರಾಜ್ಯದ ರೈತ ಸಂಘಗಳು ಮತ್ತು ಕನ್ನಡ ಪರ ಸಂಘಟನೆಗಳು ಹೋರಾಟ ಹಮ್ಮಿಕೊಂಡಿವೆ'' ಎಂದರು.
''ನಾಡು ,ನುಡಿ, ಜಲಕ್ಕೆ ತೊಂದರೆಯಾದ ಸಂದರ್ಭದಲ್ಲಿ ನಮ್ಮ ಸಂಘ ಹಲವಾರು ಹೋರಾಟ ಹಮ್ಮಿಕೊಂಡು ಬೆಂಬಲ ವ್ಯಕ್ತಪಡಿಸಿದೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹಂಚಿಕೆ ವಿಷಯದಲ್ಲೂ ಸಹ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಹಾಗೂ ಕನ್ನಡ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ'' ಎಂದು ಅವರು ಹೇಳಿದರು.
ಕಪ್ಪು ಬಟ್ಟೆ ಪ್ರದರ್ಶಿಸಿ ಆಕ್ರೋಶ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಶಿವಮೊಗ್ಗದಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪ್ರತಿಭಟನೆ ನಡೆಸಿತು.
ರಾಜ್ಯದ ಮರುಪರಿಶೀಲನಾ ಮನವಿಯನ್ನು ಮಾನ್ಯ ಮಾಡದೆ, ಮುಂದಿನ 15 ದಿನಗಳವರೆಗೆ ಪ್ರತಿ ದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಆದೇಶ ನೀಡಿರುವುದು ದುರದೃಷ್ಟಕರ. ಕರ್ನಾಟಕ ರಾಜ್ಯ ಕಾವೇರಿ ಜಲ ವಿವಾದದಲ್ಲಿ ಹೊತ್ತಿ ಉರಿಯುತ್ತಿದೆ. ನೆಲ, ಭಾಷೆ ಮತ್ತು ಜಲದ ಸಮಸ್ಯೆಗಳು ಬಂದಾಗ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಉಭಯ (ತಮಿಳುನಾಡು ಮತ್ತು ಕರ್ನಾಟಕ) ರಾಜ್ಯಗಳಿಗೆ ಸಂಬಂಧಪಟ್ಟ ತಜ್ಞರ ಸಮಿತಿಯನ್ನು ಎರಡು ರಾಜ್ಯಗಳಿಗೆ ಕಳುಹಿಸಿ ವಾಸ್ತವ ಪರಿಸ್ಥಿತಿಗಳನ್ನು ಅಧ್ಯಯನ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಅನುಭವಿಸುತ್ತಿರುವ ಸಂಕಷ್ಟವನ್ನು ಗಮನಿಸಿ ನ್ಯಾಯ ಒದಗಿಸುವಂತೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಕಾವೇರಿ ಕಿಚ್ಚು: ಡಿಸಿ ಕಚೇರಿ ಎದುರು ಧರಣಿ, ಸಿಎಂಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ