ಬೆಂಗಳೂರು:ಕಾವೇರಿ ನದಿ ನೀರು ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ. ಶತಮಾನಗಳ ಇತಿಹಾಸವಿರುವ ವಿವಾದಕ್ಕೆ ನ್ಯಾಯಾಧಿಕರಣ ತೆರೆ ಎಳೆಯುವ ತೀರ್ಪು ಪ್ರಕಟಿಸಿದ್ದರೂ, ವಿವಾದ ಹೊಗೆಯಾಡುತ್ತಲೇ ಇದೆ. ನೀರಿನ ಪಾಲಿನ ವಿಷಯ ಬಿಟ್ಟು ಇದೀಗ ಮೇಕೆದಾಟು ಯೋಜನೆ ಮೂಲಕ ವಿವಾದವನ್ನು ಜೀವಂತವಾಗಿರಿಸಲಾಗುತ್ತಿದೆ. ಉಭಯ ರಾಜ್ಯಗಳ ನಡುವೆ ರಾಜಕೀಯ ಕಾರಣಗಳಿಂದಾಗಿ ವಿವಾದ ಇನ್ನೂ ವಿವಾದವಾಗಿಯೇ ಉಳಿದುಕೊಂಡಿದೆ.
ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಇರುವ ಕಾವೇರಿ ನದಿ ನೀರು ಹಂಚಿಕೆ ವಿವಾದ ಸ್ವಾತಂತ್ರ್ಯಾ ನಂತರವೂ ಮುಂದುವರೆದಿದೆ. ಮಳೆ ಕೊರತೆಯಾದಾಗಲೆಲ್ಲಾ ರಾಜ್ಯವನ್ನು ಕಾಡುತ್ತಲೇ ಬರುತ್ತಿರುವ ತಮಿಳುನಾಡು ಪದೇ ಪದೇ ರಾಜ್ಯವನ್ನು ಕೆಣಕುತ್ತಲೇ ಬರುತ್ತಿದೆ. ರಾಜಕೀಯ ಕಾರಣಕ್ಕಾಗಿಯೇ ಸಾಕಷ್ಟು ಬಾರಿ ವಿವಾದಕ್ಕೆ ತುಪ್ಪ ಸುರಿಯವ ಕೆಲಸವನ್ನು ತಮಿಳುನಾಡು ಮಾಡಿಕೊಂಡು ಬಂದಿದೆ.
1991ರಲ್ಲಿ ಮಧ್ಯಂತರ ಆದೇಶ:ತಮಿಳುನಾಡು ಸರ್ಕಾರ ಪದೇ ಪದೇ ಕೋರ್ಟ್ ಮೆಟ್ಟಿಲೇರುತ್ತಿದ್ದರಿಂದ ಅಂತಿಮವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ 1990ರಲ್ಲಿ ಕೇಂದ್ರ ಸರ್ಕಾರ ಕಾವೇರಿ ನದಿ ಜಲ ವಿವಾದ ನ್ಯಾಯಮಂಡಳಿ ಸ್ಥಾಪಿಸಿ ಪ್ರಕಟಣೆ ಹೊರಡಿಸಿತು. ಸಾಕಷ್ಟು ವಿಚಾರಣೆ ನಂತರ ನ್ಯಾಯಮಂಡಳಿ ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳಿಗೆ ನೀರಿನ ಪಾಲು ನಿಗದಿಪಡಿಸಿ, 1991ರ ಜೂನ್ನಲ್ಲಿ ಮಧ್ಯಂತರ ಆದೇಶ ಹೊರಡಿಸಿತು. ಅದರ ಅನ್ವಯ ಕರ್ನಾಟಕವು ತಮಿಳುನಾಡಿಗೆ ಪ್ರತಿ ವರ್ಷ ಜೂನ್‌ನಿಂದ ಮೇ ತಿಂಗಳವರೆಗೆ ಒಟ್ಟು 205 ಟಿ.ಎಂ.ಸಿ ನೀರನ್ನು ಬಿಡುವಂತೆ ಹಾಗೂ 11.2 ಲಕ್ಷ ಎಕರೆ ನೀರಾವರಿ ಪ್ರದೇಶ ವಿಸ್ತರಣೆ ಮಾಡದಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು.
ಸುಗ್ರೀವಾಜ್ಞೆ ಹೊರಡಿಸಿದ್ದ ಎಸ್.ಬಂಗಾರಪ್ಪ:ಈ ಮಧ್ಯಂತರ ತೀರ್ಪಿನ ವಿರುದ್ಧ ಮೈಸೂರು ಪ್ರಾಂತ್ಯದ ರೈತರು ಬೀದಿಗಿಳಿದರು. ಉಗ್ರ ಹೋರಾಟ ನಡೆಸಿದರು. ಪರಿಸ್ಥಿತಿ ಕೈಮೀರಿದ್ದರಿಂದ ಹೋರಾಟದ ಜ್ವಾಲೆ ಇರುವೆಡೆ ನಿಷೇದಾಜ್ಞೆ ಜಾರಿಗೊಳಿಸಲಾಯಿತು. ಆದರೂ ಹೋರಾಟದ ಕಿಚ್ಚು ಹೆಚ್ಚಿದ ಪರಿಣಾಮ ಅಂದು ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಮಧ್ಯಂತರ ತೀರ್ಪು ವಿರೋಧಿಸಿ ನಮ್ಮ ಪಾಲಿನ ನೀರು ನಾವು ಬಳಸಿಕೊಳ್ಳುತ್ತೇವೆ. ಯಾರಿಗೂ ಬಿಡುವುದಿಲ್ಲ ಎಂದು ಸುಗ್ರೀವಾಜ್ಞೆ ಹೊರಡಿಸಿ ರಾಜ್ಯದ ಪರ ಕೆಚ್ಚೆದೆ ಪ್ರದರ್ಶಿಸಿದರು.
2007 ರಲ್ಲಿ ಅಂತಿಮ ತೀರ್ಪು ಪ್ರಕಟ: ಆದರೆ ಸುಪ್ರೀಂಕೋರ್ಟ್‌ನಲ್ಲಿ ಸುಗ್ರೀವಾಜ್ಞೆ ಅಸಿಂಧು ಎಂದು ತೀರ್ಪು ಬಂದಿದ್ದರಿಂದ ರಾಜ್ಯಕ್ಕೆ ಮತ್ತೆ ದೊಡ್ಡ ಹಿನ್ನಡೆಯಾಯಿತು. ನಂತರ ಸುದೀರ್ಘ 9 ವರ್ಷಗಳ ಕಾನೂನು ಹೋರಾಟದ ಬಳಿಕ 1892 ಮತ್ತು 1924 ರ ಮೈಸೂರು, ಮದ್ರಾಸ್ ನಡುವಿನ ಒಪ್ಪಂದಗಳನ್ನು ಮಾನ್ಯವೆಂದು ಪರಿಗಣಿಸಿ 2007 ರಲ್ಲಿ ಕಾವೇರಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿತು.
ಅದರಂತೆ ಕಾವೇರಿ ಕೊಳ್ಳದ ಒಟ್ಟಾರೆ ನೀರಿನ ಪ್ರಮಾಣ 740 ಟಿಎಂಸಿ ಅಡಿ ಎಂದು ತೀರ್ಮಾನಿಸಿ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಪಾಂಡಿಚೇರಿಗೆ 7 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಯಿತು. ಇದರ ಜೊತೆ ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಬಿಡಬೇಕು ಎಂದು ನಿರ್ದೇಶಿಸಿ ಐ ತೀರ್ಪು ಪ್ರಕಟಿಸಿತು. ಮಧ್ಯಂತರ ತೀರ್ಪಿನಲ್ಲಿ ಮಿತಿಗೊಳಿಸಿದ್ದ 11.2 ಲಕ್ಷ ನೀರಾವರಿ ಪ್ರದೇಶವನ್ನು 18.85 ಲಕ್ಷ ಎಕರೆಗಳಿಗೆ ವಿಸ್ತರಿಸಲು ಸಮ್ಮತಿಸಿತು.
ಕೋರ್ಟ್ ಮೆಟ್ಟಿಲೇರಿದ್ದ 4 ರಾಜ್ಯಗಳು: ಈ ತೀರ್ಪು ಪ್ರಶ್ನಿಸಿ ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಅಂದಿನ ಸಿಜೆಐ ದೀಪಕ್ ಮಿಶ್ರಾ ಅವರು ನ್ಯಾಯಾಧಿಕರಣ ಕೊಟ್ಟಿದ್ದ ತೀರ್ಪಿನಲ್ಲಿ ಕೆಲ ಮಾರ್ಪಾಡು ಮಾಡಿ ತಮ್ಮ ತೀರ್ಪು ನೀಡಿದ್ದರು. ಅದರ ಪ್ರಕಾರ ಕರ್ನಾಟಕಕ್ಕೆ ಐ ತೀರ್ಪಿನಲ್ಲಿ ಹಂಚಿಕೆಯಾಗಿದ್ದ, 270 ಟಿಎಂಸಿ ಅಡಿ ಜೊತೆ 14.75 ಟಿಎಂಸಿ ಅಡಿ ಹೆಚ್ಚುವರಿ ಮಂಜೂರು ಮಾಡಿ 284.75 ಟಿಎಂಸಿ ಅಡಿಗೆ ಪುನರ್ ನಿಗದಿಪಡಿಸಲಾಯಿತು. ತಮಿಳುನಾಡಿಗೆ ಪ್ರತಿ ವರ್ಷ ಹರಿಸಬೇಕಿದ್ದ 192 ಟಿಎಂಸಿ ಅಡಿ ನೀರನ್ನು 177.25 ಟಿಎಂಸಿ ಅಡಿಗೆ ಇಳಿಕೆ ಮಾಡಲಾಯಿತು.
ಇಷ್ಟು ಮಾತ್ರವಲ್ಲದೆ, ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ನಡುವೆ ನೀರು ಹಂಚಿಕೆಯ ಮೇಲ್ವಿಚಾರಣೆ ನಡೆಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸುಪ್ರೀಂಕೋರ್ಟ್ ತೀರ್ಪಿನಂತೆ ರಚಿಸಲಾಯಿತು. ಜೊತೆಗೆ 2013ರಲ್ಲಿ ಕೇಂದ್ರ ಸರ್ಕಾರವು ಕಾವೇರಿ ಆಡಳಿತ ಮಂಡಳಿಯನ್ನು ಅಂತಿಮ ತೀರ್ಪಿನ ಜೊತೆ ಗೆಜೆಟ್ ಪ್ರಕಟಣೆಯಲ್ಲಿ ರಚಿಸಿ ಆದೇಶ ಮಾಡಿತು.