ಬೆಂಗಳೂರು: ಸದ್ಗುರು ಜಗ್ಗಿ ವಾಸುದೇವ ಮುಖ್ಯಸ್ಥಿಕೆಯ ಈಶ ಫೌಂಡೇಶನ್ ಕಾವೇರಿ ನದಿ ತಪ್ಪಲಿನಲ್ಲಿ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಿರುವ ‘ಕಾವೇರಿ ಕೂಗು’ ಯೋಜನೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಹಣ ಸಂಗ್ರಹ ಪ್ರಶ್ನಿಸಿ ವಕೀಲ ಎ.ವಿ.ಅಮರನಾಥ್ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿತ್ತು. ಈ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್‌ಚಂದ್ರ ಶರ್ಮ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಸರ್ಕಾರ ಹಾಗೂ ಅಮಿಕಸ್ ಕ್ಯೂರಿ ವಾದ-ಪ್ರತಿವಾದಗಳನ್ನು ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಪ್ರಶ್ನಿಸಿದ ಪೀಠ, ಯೋಜನೆಗೆ ಹಣ ಸಂಗ್ರಹಿಸುತ್ತಿರುವುದು ಸ್ವಯಂಪ್ರೇರಿತವೋ, ಕಡ್ಡಾಯವೋ? ಸರ್ಕಾರಿ ಜಾಗದಲ್ಲಿ ಗಿಡ ನೆಡುವುದು ಅಪರಾಧವೇ? ಅದನ್ನು ತಡೆಯುವುದಕ್ಕೆ ಯಾವ ಕಾನೂನು ಇದೆ? ಎಂದು ಪ್ರಶ್ನಿಸಿತು. ಅಮಿಕಸ್ ಕ್ಯೂರಿ ಉತ್ತರಿಸಿ ಹಣ ಸಂಗ್ರಹ ಸ್ವಯಂಪ್ರೇರಿತ, ಸರ್ಕಾರಿ ಜಾಗದಲ್ಲಿ ಗಿಡ ನೆಡಬಹುದು, ಆದರೆ, ಅನುಮತಿ ಪಡೆಯಬೇಕು ಎಂದರು.
ಇದಕ್ಕ ಪ್ರತಿಕ್ರಿಯಿಸಿದ ಪೀಠ ಪ್ರತಿವಾದಿಯಾದ ಈಶ ಫೌಂಡೇಶನ್ ಟ್ರಸ್ಟ್ ಆಗಿರುವುದರಿಂದ ಅದು ಸಂಗ್ರಹಿಸುವ ಹಣ ಮತ್ತು ಖರ್ಚು ಮಾಡುವ ಹಣಕ್ಕೆ ಲೆಕ್ಕಪತ್ರವಿರುತ್ತದೆ, ಒಂದು ವೇಳೆ ಏನಾದರೂ ವ್ಯತ್ಯಾಸವಾದರೆ ಅದನ್ನು ಪರಿಶೀಲಿಸಲು ಆದಾಯ ಇಲಾಖೆ ಮತ್ತಿತರ ಸಂಸ್ಥೆಗಳಿವೆ, ಹಾಗಾಗಿ ಹಣ ದುರುಪಯೋಗವಾಗುವ ಸಾಧ್ಯತೆ ಕಡಿಮೆ ಎಂದಿತು.