ಬೆಂಗಳೂರು: ಅಖಿಲ ಭಾರತ ಸೇವಾ ನಿಯಮಗಳ ಪ್ರಕಾರ ನಿಗದಿ ಪಡಿಸಿರುವ ಕನಿಷ್ಟ ಎರಡು ವರ್ಷಗಳ ಅವಧಿಗೂ ಮುನ್ನ ಕಿಯೋನಿಕ್ಸ್ನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ತಡೆ ನೀಡಿ ಆದೇಶಿಸಿದೆ.
ಕರ್ನಾಟಕ ವಿದುನ್ಮಾನ ಅಭಿವೃದ್ಧಿ ನಿಗಮದ(ಕಿಯೋನಿಕ್ಸ್) ವ್ಯವಸ್ಥಾಪಕ ಹುದ್ದೆಗೆ ಅಧಿಕಾರ ಸ್ವೀಕರಿಸಿದ 6 ತಿಂಗಳಲ್ಲಿ ವರ್ಗಾವಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ರವಿ ಡಿ ಚನ್ನಣ್ಣನವರ್ ಸಿಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸಿಎಟಿಯ ಸದಸ್ಯರಾದ ರಾಕೇಶ್ ಕುಮಾರ್ ಗುಪ್ತಾ, ನ್ಯಾಯಮೂರ್ತಿಗಳಾದ ಎಸ್.ಸುಜಾತಾ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಅಲ್ಲದೇ, ರಾಜ್ಯ ಸರ್ಕಾರ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜುಲೈ 4 ಕ್ಕೆ ಮುಂದೂಡಿದೆ.
ಪ್ರಕರಣದ ಸಂಬಂಧ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಅರ್ಜಿದಾರರ 2008ರಲ್ಲಿ ಐಪಿಎಸ್ ಹುದ್ದೆಗೆ ಸೇಪಡೆಯಾಗಿದ್ದು, ಈವರೆಗೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಅವರ ವಿರುದ್ಧ ಈವರೆಗೂ ಯಾವುದೇ ರೀತಿಯ ಕಳಂಕ ಇಲ್ಲ. 2022ರ ನವೆಂಬರ್ 11ರಂದು ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ಕಿಯೋನಿಕ್ಸ್ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ನವೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು. 2022ರ ಡಿಸೆಂಬರ್ 31ರಂದು ವರಿಷ್ಠಾಧಿಕಾರಿಯಿಂದ ಡಿಐಜಿ ಹುದ್ದೆಗೆ ಬಡ್ತಿ ನೀಡಲಾಗಿತ್ತು.