ಬೆಂಗಳೂರು: ಚುನಾವಣೆಗೆ ಇನ್ನೇನು ದಿನಾಂಕ ನಿಗದಿಯಾಗಬೇಕಾಗಿದೆ. ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡಲು ಪ್ರಾರಂಭಿಸಿವೆ. ಇತ್ತ ಚುನಾವಣಾ ಆಯೋಗ ಈಗಿನಿಂದಲೇ ಆಮಿಷಗಳಿಗೆ ಕಡಿವಾಣ ಹಾಕಲು ಕಣಕ್ಕಿಳಿದಿದೆ.
ರಾಜ್ಯದಲ್ಲಿ ಚುನಾವಣಾ ಕಾವು ದಿನೇ ದಿನೆ ಏರುತ್ತಿದೆ. ಚುನಾವಣಾ ಪಕ್ಷಗಳು ತಮ್ಮ ಮತದಾರರನ್ನು ಓಲೈಸಲು ನಾನಾ ಕಸರತ್ತು ಆರಂಭಿಸಿವೆ. ಶೀಘ್ರದಲ್ಲೇ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಲಿದ್ದು, ಅದರ ಜೊತೆಗೆ ನೀತಿ ಸಂಹಿತೆಯೂ ಜಾರಿಗೆ ಬರಲಿದೆ. ಇದಕ್ಕೂ ಮೊದಲೇ ರಾಜಕೀಯ ಪಕ್ಷಗಳು ಪೈಪೋಟಿ ಮೇಲೆ ಮತದಾರರಿಗೆ ಹಣ, ಹೆಂಡ, ಸೀರೆ ಸೇರಿ ನಾನಾ ಆಮಿಷಗಳನ್ನು ಒಡ್ಡಲು ಶುರು ಮಾಡಿವೆ. ಅದರ ಗಾಂಭೀರ್ಯತೆ ಅರಿತ ಚುನಾವಣಾ ಆಯೋಗ ಆಮಿಷಗಳಿಗೆ ಕಡಿವಾಣ ಹಾಕಲು ಕಾರ್ಯಾಚರಣೆ ಆರಂಭಿಸಿದೆ. ಆಯೋಗ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಬರೋಬ್ಬರಿ 9.29 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಆಯೋಗ ಜಪ್ತಿ ಮಾಡಿರುವುದೆಷ್ಟು?:ಚುನಾವಣಾ ಆಯೋಗ ಈವರೆಗೂ ಸುಮಾರು 1.21 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದೆ. ಮತದಾರರಿಗೆ ಹಂಚಲು ಸಾಗಾಟ ಮಾಡುತ್ತಿದ್ದ ಸುಮಾರು 2.66 ಕೋಟಿ ಮೌಲ್ಯದ, 59,265 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.
ಇನ್ನು 1.88 ಕೋಟಿ ಮೌಲ್ಯದ 577 ಕೆ.ಜಿ. ವಿವಿಧ ಮಾದಕ ವಸ್ತುಗಳು, ಮತದಾರರಿಗೆ ಹಂಚಲು ಉದ್ದೇಶಿಸಿದ್ದ ಚಿನ್ನ, ಬೆಳ್ಳಿ ಸೇರಿದಂತೆ ಇತರ ಮೌಲ್ಯಯುತ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪೈಕಿ 1.87 ಕೋಟಿ ಮೌಲ್ಯದ 5.32 ಚಿನ್ನ ಹಾಗೂ 80 ಲಕ್ಷ ಮೊತ್ತದ 15 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.