ಬೆಂಗಳೂರು :ಪ್ರಚಂಡ ಬಹುಮತದೊಂದಿಗೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಭರ್ತಿಯಾಗಿದೆ. ಸಚಿವರಿಗೆ ಖಾತೆಗಳು ಹಂಚಿಕೆಯಾಗಿವೆ. ಇಂದಿನಿಂದ ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭವಾಗಿದೆ. ಈ ನಡುವೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿರುವ 34 ಸಚಿವರ ಪೈಕಿ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ರಾಜ್ಯ ಸರ್ಕಾರದ 34 ಸಚಿವರ ಪೈಕಿ 16 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದು ಉಲ್ಲೇಖವಾಗಿದೆ. ಕೆಲವು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿವೆ. ಸಚಿವ ಬಿ ನಾಗೇಂದ್ರ ಅವರ ವಿರುದ್ಧ 42 ಪ್ರಕರಣಗಳಿದ್ದು, ಈ ಪೈಕಿ 21 ಪ್ರಕರಣಗಳು ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿವೆ.
ಕೇಂದ್ರೀಯ ತನಿಖಾ ದಳದಲ್ಲಿ ನಾಲ್ಕು ಪ್ರಕರಣಗಳು ಪರಿಶೀಲನೆ ಹಂತದಲ್ಲಿವೆ. ಒಂದು ಪ್ರಕರಣ ಸಿಐಡಿ ತನಿಖೆ ನಡೆಸುತ್ತಿದೆ. 1957 ರ ಗಣಿ ಮತ್ತು ಖನಿಜ ನಿಯಂತ್ರಣದ ಅಭಿವೃದ್ಧಿ ಕಾಯಿದೆ ಮತ್ತು 1957 ರ ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ನಾಗೇಂದ್ರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅದೇ ರೀತಿ, ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ 19 ಪ್ರಕರಣಗಳು ಬಾಕಿ ಇವೆ. ಸಾಕ್ಷ್ಯಾಧಾರಗಳ ಕಣ್ಮರೆಯಾಗಲು ಕಾರಣವಾಗುವುದು, ಅಪರಾಧಿಗಳಿಗೆ ಸುಳ್ಳು ಮಾಹಿತಿ ನೀಡುವುದು, ಲಂಚ ಮತ್ತು ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ ಸೇರಿದಂತೆ ಡಿ ಕೆ ಶಿವಕುಮಾರ್ ಅವರು 6 ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಚುನಾವಣೆಯಲ್ಲಿ ಅನಗತ್ಯ ಪ್ರಭಾವ, ಲಂಚ, ಅಕ್ರಮ ಸಭೆ ಸೇರಿದಂತೆ 13 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ನರ ಹತ್ಯೆ, ನಿರ್ಲಕ್ಷ್ಯ, ಹಲ್ಲೆ, ಪೋರ್ಜರಿ, ಆಸ್ತಿ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಒಟ್ಟು 6 ಗಂಭೀರ ಸ್ವರೂಪದ ಪ್ರಕರಣಗಳಿವೆ.
ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ವನ್ಯಜೀವಿಗಳ ಅಕ್ರಮ ವಸತಿಗಾಗಿ 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳಿದಂತೆ, ಸಚಿವರಾದ ಪ್ರಿಯಾಂಕ್ ಖರ್ಗೆ ವಿರುದ್ಧ 9, ಈಶ್ವರ್ ಖಂಡ್ರೆ ವಿರುದ್ಧ 7, ರಾಮಲಿಂಗಾರೆಡ್ಡಿ ವಿರುದ್ಧ 4, ಎಂ ಬಿ ಪಾಟೀಲ್ ವಿರುದ್ಧ 5, ಡಾ ಜಿ ಪರಮೇಶ್ವರ್ ವಿರುದ್ಧ 3, ಹೆಚ್ ಕೆ ಪಾಟೀಲ್ 2, ಡಿ ಸುಧಾಕರ್ 2, ಸತೀಶ್ ಜಾರಕಿಹೊಳಿ ವಿರುದ್ಧ 2, ಕೃಷ್ಣ ಬೈರೇಗೌಡ 1, ಕೆ ಹೆಚ್ ಮುನಿಯಪ್ಪ ವಿರುದ್ಧ 1, ಎನ್ ಚೆಲುವರಾಯಸ್ವಾಮಿ ವಿರುದ್ಧ 1 ಪ್ರಕರಣಗಳು ಬಾಕಿ ಉಳಿದಿವೆ.
ಇದನ್ನೂ ಓದಿ:ರಾಮಲಿಂಗಾರೆಡ್ಡಿಗೆ ಸಾರಿಗೆ, ಪರಮೇಶ್ವರ್ಗೆ ಗೃಹ: ಯಾರಿಗೆ ಯಾವ ಖಾತೆ? ಸಂಪೂರ್ಣ ವಿವರ..