ಆರೋಪಿಗಳನ್ನು ಕೆಲ ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದ ಸಿಸಿಬಿ ಬೆಂಗಳೂರು:ನಗರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ ಆರೋಪದಡಿ ಬಂಧಿತ ಏಳು ಮಂದಿ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಾಗಿದೆ. ಸಿಸಿಬಿ ವಿಶೇಷ ತನಿಖಾ ವಿಭಾಗದ ಎಸಿಪಿ ನವೀನ್ ಕುಲಕರ್ಣಿ ನೀಡಿದ ದೂರು ಆಧರಿಸಿ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವುದು, ಉತ್ತೇಜಿಸುವುದು ಅಥವಾ ಬೆಂಬಲಿಸುವುದು ತನಿಖೆಯಲ್ಲಿ ಕಂಡು ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಗೆ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಜಾರಿ ತಂದಿತ್ತು. ಅಲ್ಲದೆ ಆರೋಪಿ ಐಪಿಸಿ ಸೆಕ್ಷನ್ 121- ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿ, 12 (ಎ) ದೇಶದ ಒಳಗೆ ಹಾಗೂ ಹೊರಗೆ ನಡೆಸುವ ಪಿತೂರಿ, 120 (ಬಿ) ಒಳಸಂಚು ಪ್ರಕರಣದಡಿ ಬಂಧಿತ ಐವರು ಆರೋಪಿಗಳು ಸೇರಿದಂತೆ ಪ್ರಕರಣ ಪ್ರಮುಖ ರೂವಾರಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಟಿ ನಜೀರ್ ವಿರುದ್ಧ ಯುಎಪಿಎ ಅಡಿ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಂಕಿತ ಐವರನ್ನು ಪೊಲೀಸ್ ವಶಕ್ಕೆ ಪಡೆಯಲು ಮಡಿವಾಳದ ಟೆಕ್ನಿಕಲ್ ಸೆಂಟರ್ನಿಂದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಬಿಗಿ ಭದ್ರತೆಯೊಂದಿಗೆ ಪೊಲೀಸರು ಹಾಜರುಪಡಿಸಿದರು. ಉಗ್ರ ಕೃತ್ಯವೆಸಗಲು ಆರೋಪಿಗಳು ಸಂಚು ರೂಪಿಸಿದ್ದು, ಇವರ ಹಿಂದೆ ಮತೀಯ ಶಕ್ತಿಗಳ ಕೈವಾಡವಿದೆ. ಆರೋಪಿಗಳ ಬಳಿಯಿದ್ದ 42 ಮದ್ದು ಗುಂಡುಗಳು, 7 ಕಂಟ್ರಿ ಮೇಡ್ ಪಿಸ್ತೂಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಕೆಲ ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡುವಂತೆ ಪೊಲೀಸರ ಮನವಿಗೆ ಸ್ಪಂದಿಸಿದ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾ. ಸಿ ಎಂ ಗಂಗಾಧರ ಅವರು ಶಂಕಿತ ಉಗ್ರರನ್ನು ಪೊಲೀಸ್ ಕಸ್ಟಡಿಗೆ ನೀಡಲು ಪುರಸ್ಕರಿಸಿದರು.
ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗುವುದು:ಇನ್ನೊಂದೆಡೆರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕರ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಬಿಜೆಪಿ, ಜೆಡಿಎಸ್ನ ಸದಸ್ಯರ ಗದ್ದಲದ ನಡುವೆಯೂ ಸ್ವಯಂಪ್ರೇರಿತವಾಗಿ ಮಹತ್ವದ ಹೇಳಿಕೆ ನೀಡಿದ ಗೃಹ ಸಚಿವರು, ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರು ಐವರು ಶಂಕಿತರನ್ನು ಬಂಧಿಸಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧನ: ಈ ಆರೋಪಿಗಳು ಹಲವು ದಿನಗಳಿಂದಲೂ ಶಸ್ತ್ರಾಸ್ತ್ರ, ಮದ್ದುಗುಂಡು, ಸಲಕರಣೆ ಸೇರಿದಂತೆ ಹಲವಾರು ವಸ್ತುಗಳನ್ನು ಸಂಗ್ರಹಿಸಿ ದೇಶದ ಐಕ್ಯತೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವಿಧ್ವಂಸಕ ಕೃತ್ಯವಾದ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರುಗಳಿಂದ 7 ನಾಡ ಪಿಸ್ತೂಲುಗಳು, 45 ಜೀವಂತ ಗುಂಡು, ವಾಕಿಟಾಕಿ, 12 ಮೊಬೈಲ್ ಸೇರಿದಂತೆ ಹಲವಾರು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಸಂಭವನೀಯ ದಾಳಿಯನ್ನು ತಡೆದಿದ್ದಾರೆ: ಈ ಆರೋಪಿಗಳು ಜೈಲಿನಲ್ಲಿರುವ ಕೈದಿಗಳ ಜೊತೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತ ವಿಧ್ವಂಸಕ ಕೃತ್ಯ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಹಲವಾರು ಕೊಲೆ, ಸುಲಿಗೆ ಪ್ರಕರಣಗಳಲ್ಲೂ ತೊಡಗಿಸಿಕೊಂಡಿದ್ದರು. ದೇಶದ್ರೋಹಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಈ ಆರೋಪಿಗಳನ್ನು ಹೆಬ್ಬಾಳ ಪೊಲೀಸ್ ಠಾಣೆ ಪೊಲೀಸರು ಬಂಧಿಸುವ ಮೂಲಕ ಸಂಭವನೀಯ ದಾಳಿಯನ್ನು ತಡೆದಿದ್ದಾರೆ ಎಂದರು.
ಈ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕದಲ್ಲಿರುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಅನುಸರಿಸಿದ ಮಾರ್ಗಗಳು ಹಾಗೂ ಯಾವ ರೀತಿಯ ವಿಧ್ವಂಸಕ ಕೃತ್ಯವನ್ನು ನಡೆಸಲು ಸಂಚು ರೂಪಿಸಿದ್ದರು ಎಂಬ ವಿಚಾರಗಳ ತನಿಖೆಗೆ ಪ್ರಕರಣವನ್ನು ಸಿಸಿಬಿ ತನಿಖೆಗೆ ಒಪ್ಪಿಸಿರುವುದಾಗಿ ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ತೀವ್ರ ಪ್ರತಿಭಟನೆ: ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಘೋಷಣೆ