ಬೆಂಗಳೂರು: ನಿನ್ನೆ (ಮಂಗಳವಾರ) ಬೆಂಗಳೂರು ಬಂದ್ ವೇಳೆ ಜಯನಗರದಲ್ಲಿ ನಡೆದಿದ್ದ ಗೂಂಡಾಗಿರಿ ಘಟನೆ ಸಂಬಂಧ ಕಿಡಿಗೇಡಿಗಳ ವಿರುದ್ಧ ಪ್ರತ್ಯೇಕ ನಾಲ್ಕು ಎಫ್ಐಆರ್ ದಾಖಲಾಗಿದೆ. ಜಯನಗರದ ಉಡುಪಿ ಹಬ್ ಹೊಟೇಲ್‌ಗೆ ನುಗ್ಗಿ ಮೇಜು-ಕುರ್ಚಿ ಸೇರಿದಂತೆ ಇತರೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಆರೋಪದಡಿ ವಿಶ್ವ ಹಾಗೂ ಶಿವ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಡುಪಿ ಹೊಟೇಲ್ ಮಾತ್ರವಲ್ಲದೆ ಮೋರ್ ಸೂಪರ್ ಮಾರ್ಕೆಟ್, ಕಾಫಿ ಡೇ ಹಾಗೂ ಫಿಲ್ಟರ್ ಕಾಪಿ ಹೊಟೇಲ್ಗಳಿಗೂ ನುಗ್ಗಿ ಆರೋಪಿಗಳು ದಾಂಧಲೆ ನಡೆಸಿದ್ದರು. ಈ ಸಂಬಂಧ ಪ್ರತ್ಯೇಕವಾಗಿ ನೀಡಿದ ದೂರಿನ ಮೇರೆಗೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲು ಧರಿಸಿ ಹೊಟೇಲ್‌ಗೆ ನುಗ್ಗಿ ದಾಂಧಲೆಗೈದ ಆರೋಪಿಗಳು ಶಾಸಕ ರಾಮಮೂರ್ತಿ ಕಡೆಯವರು ಎಂದು ದೂರಲಾಗಿತ್ತು. ಗುಂಪು ಸೇರಿಸಿ ಪ್ರತಿಭಟನೆ ನಡೆಸುತ್ತಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸತತ ಐದು ಗಂಟೆಗಳ ಕಾಲ ಠಾಣೆಯಲ್ಲಿ ಇರಿಸಿ ಪ್ರಶ್ನಿಸಲಾಗಿತ್ತು. ಈ ವೇಳೆ ಕಿಡಿಗೇಡಿಗಳು ನಮ್ಮ ಪಕ್ಷದವರಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಉಡುಪಿ ಹೊಟೇಲ್ ಮಾಲೀಕರು ಪ್ರತಿಕ್ರಿಯಿಸಿದ್ದು, ನಿನ್ನೆ ನಡೆದ ಕೃತ್ಯಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಪೀಠೋಪಕರಣ ಧ್ವಂಸ ಸಂಬಂಧ ಆಗಿದ್ದ ನಷ್ಟವನ್ನು ಶಾಸಕ ರಾಮಮೂರ್ತಿಯವರು ತುಂಬಿಕೊಡಲಿದ್ದಾರೆ. ಘಟನೆಯನ್ನು ದೊಡ್ಡದು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸಿದ್ದು, ಕೃತ್ಯ ಸಂಬಂಧ ಕಿಡಿಗೇಡಿಗಳಿಗೂ ನಮಗೂ ಸಂಬಂಧವಿಲ್ಲ. ಆಗಬಾರದು ಆಗಿಹೋಗಿದೆ. ಹೊಟೇಲ್‌ಮಾಲೀಕರಿಗೆ ಆಗಿರುವ ನಷ್ಟವನ್ನ ತುಂಬಿಕೊಡುವೆ ಎಂದಿದ್ದಾರೆ.