ಬೆಂಗಳೂರು: ಬಳ್ಳಾರಿಯ ಜೆಎಂಎಫ್ಸಿ ನ್ಯಾಯಾಧೀಶ ಎಸ್.ಜೆ ವಿಜಯ್ ಕುಮಾರ್ ಅವರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸಿದ್ದ ವಿಚಾರವಾಗಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು, ಆದೇಶ ಕಾಯ್ದಿರಿಸಿದೆ.
ನ್ಯಾಯಾಧೀಶರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಎಂಬ ನಿಟ್ಟಿನಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಕ್ರಿಮಿನಲ್ ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ದೂರುದಾರ ಸಿಎಂ ಮಂಜುನಾಥ್ ಪರ ವಾದಿಸಿದ ವಕೀಲರು, ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರೂ ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಅಥವಾ ನ್ಯಾಯಾಂಗ ವ್ಯವಸ್ಥೆ ಪರವಾಗಿಯೂ ಅಲ್ಲ. ಬದಲಿಗೆ ಓರ್ವ ನ್ಯಾಯಾಧೀಶರ ಪರವಾಗಿ ಪ್ರಕರಣ ದಾಖಲಿಸಿಕೊಂಡಿರುವುದು ಸರಿ ಎನ್ನಿಸುವುದಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಅರ್ಜಿದಾರರು ನ್ಯಾಯಾಧೀಶರ ವಿರುದ್ಧ ಯಾವುದೇ ದ್ವೇಷ ಹೊಂದಿಲ್ಲ. ಸದುದ್ದೇಶದಿಂದ ಹಾಗೂ ಹೋರಾಟ ಮನೋಭಾವದಿಂದ ದೂರು ದಾಖಲಿಸಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಧೀಶರ ವಿರುದ್ಧ ದೂರು ನೀಡಿದಾಗ ನಾವು ಕಾನೂನಾತ್ಮಕ ಪರಿಹಾರ ಪಡೆದುಕೊಳ್ಳಬಹುದು ಎಂದಿದ್ದೆವು. ಹಾಗೆಂದು ನ್ಯಾಯಾಧೀಶರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಅರ್ಥೈಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿತು. ಬಳಿಕ, ಅರ್ಜಿದಾರರ ವಾದ ದಾಖಲಿಸಿಕೊಂಡ ಪೀಠ, ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿತು.