ಬೆಂಗಳೂರು:ಟೋಯಿಂಗ್ ವಾಹನದ ಸಿಬ್ಬಂದಿ ಕುಡಿದು ಟೋಯಿಂಗ್ ಮಾಡಿದ ಆರೋಪದ ಮೇಲೆ ನಡೆದ ಗಲಾಟೆ ಮಾಡಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೋಯಿಂಗ್ ವಾಹನಕ್ಕೆ ಅಡ್ಡಿ ಆರೋಪ: ಬೆಂಗಳೂರಲ್ಲಿ 20 ಮಂದಿ ವಿರುದ್ಧ ಪ್ರಕರಣ - ಟೋಯಿಂಗ್ ವಾಹನದ ಸಿಬ್ಬಂದಿ
ಮದ್ಯ ಸೇವಿಸಿ ಟೋಯಿಂಗ್ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಸುಮಾರು 20 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜಾಜಿನಗರದ ಸಂಚಾರಿ ವಿಭಾಗದ ಎಎಸ್ಐ ಶಿವಾನಂದ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ರಾಜಾಜಿನಗರದ ಅಂಗಡಿಯೊಂದರ ಬಳಿ ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದೇವೆ. ಈ ಬೋರ್ಡ್ ಹಾಕಿದಾಗಿನಿಂದ ಹಲವರು ತಕರಾರು ಮಾಡಿದ್ದರು. ನಿನ್ನೆ ಸಹ ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಟೋಯಿಂಗ್ ಮಾಡಲು ಹೋಗಿದ್ದಾಗ ವಾಹನದ ಚಾಲಕ ಮದ್ಯ ಸೇವಿಸಿದ್ದಾರೆಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ರೆ ಆಲ್ಕೋಮೀಟರ್ ನಲ್ಲಿ ಪರೀಕ್ಷೆಗೊಳಪಡಿಸಿದಾಗ, ಆರೋಪ ಸುಳ್ಳೆಂದು ಸಾಬೀತಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಸುಖಾಸುಮ್ಮನೆ ಗಲಾಟೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗೆಯೇ ಚಾಲಕನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಹಲಸೂರು ಗೇಟ್ ಟ್ರಾಫಿಕ್ ಸ್ಟೇಷನ್ ಕಾನ್ಸ್ಟೇಬಲ್ಗೆ ಘಟನೆಗೆ ಕಾರಣ ಕೋರಿ ಸಮನ್ಸ್ ಜಾರಿ ಮಾಡಿದ್ದೇವೆ. ಪೇದೆಯಿಂದ ಉತ್ತರ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ರವಿಕಾಂತೇಗೌಡ ಇದೇ ವೇಳೆ ತಿಳಿಸಿದರು.