ಬೆಂಗಳೂರು :ಖಾಸಗಿ ಶಾಲೆಗಳ ಒಕ್ಕೂಟ ಕಾರ್ಯದರ್ಶಿ (ಕ್ಯಾಮ್ಸ್) ಶಶಿಕುಮಾರ್ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣ ಭೇದಿಸಿರುವ ಜಾಲಹಳ್ಳಿ ಪೊಲೀಸರು ಈ ಸಂಬಂಧ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಜಾಲಹಳ್ಳಿ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ದಿಲೀಪ್, ಅಭಿಷೇಕ್, ಕಾರ್ತಿಕ್, ಭರತ್ ಹಾಗೂ ಪವನ್ ಎಂಬುವರನ್ನ ಬಂಧಿಸಿದಾರೆ.
ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮಾರಕಾಸ್ತ್ರಗಳು, ಡ್ರ್ಯಾಗರ್, ಪೆಪ್ಪರ್ ಸ್ಪ್ರೇ ಬಾಟೆಲ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಕೃತ್ಯದಲ್ಲಿ ಪ್ರಮುಖ ಆರೋಪಿ ಲಗ್ಗೆರೆ ರವಿ ಸೇರಿ ಆರು ಮಂದಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಅಂದು ಆಗಿದ್ದೇನು?
ಕ್ಯಾಮ್ಸ್ ಕಾರ್ಯದರ್ಶಿಯಾಗಿರುವ ಶಶಿಕುಮಾರ್ ಕಳೆದ ತಿಂಗಳು 29ರ ರಾತ್ರಿ 9 ಗಂಟೆ ಸುಮಾರಿಗೆ ಜಾಲಹಳ್ಳಿ ನಿವಾಸ ಬಳಿ ಕಾರಿನಿಂದ ಇಳಿಯುತ್ತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಶಶಿಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಕೂಡಲೇ ಕಾರಿನಲ್ಲಿ ಕುಳಿತಕೊಂಡ ಶಶಿಕುಮಾರ್‌ಗೆ ಸಣ್ಣಪುಟ್ಟ ಗಾಯವಾಗಿತ್ತು. ಜೀವ ರಕ್ಷಣೆಗಾಗಿ ತಮ್ಮ ಬಳಿಯಿದ್ದ ಪಿಸ್ತೂಲ್ ತೆಗೆಯುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.
ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಎಸಿಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಸಾರಥ್ಯದಲ್ಲಿ ನಾಲ್ಕು ವಿಶೇಷ ತಂಡ ರಚಿಸಿ ಚುರುಕಿನಿಂದ ತನಿಖೆ ನಡೆಸಿ ಐದು ಮಂದಿ ಆರೋಪಿಗಳ ಬಂಧನಕ್ಕೆ ಕಾರಣವಾಗಿದೆ.
ಕೊಲೆ ಯತ್ನಕ್ಕೆ ಕಾರಣವೇನು?
2014ರಿಂದ ಕರ್ನಾಟಕ ವಿದ್ಯಾರ್ಥಿ ಪೋಷಕರ ಸಂಘದಲ್ಲಿ ಗುರುತಿಸಿಕೊಂಡಿದ್ದ ಲಗ್ಗೆರೆ ರವಿ ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಆಗಿ ಕುಖ್ಯಾತಿ ಪಡೆದಿದ್ದ. 2019ರಲ್ಲಿ ವಿಜಯನಗರ ಠಾಣಾ ವ್ಯಾಪ್ತಿಯ ಶಾಲೆಯೊಂದರ ಪ್ರಿನ್ಸಿಪಾಲ್ ಆಗಿದ್ದ ವೀರಭದ್ರಪ್ಪ ಎಂಬುವರ ಅಪಹರಣ ಸೇರಿದಂತೆ ಏಳಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರವಿ ಜೈಲು ಸೇರಿದ್ದ. ಇನ್ನೊಂದಡೆ ಖಾಸಗಿ ಶಾಲೆಗಳ ಮಾಲೀಕರಿಂದ ಹಫ್ತಾ ವಸೂಲಿ ನಿಂತಿದ್ದರಿಂದ ಹಾಗೂ ಮರಳಿ ಹಣ ಪಡೆಯಲು ಯೋಜನೆ ರೂಪಿಸಿದ್ದ. ಅಲ್ಲದೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮುಗಿಸಿದರೆ ಇತರೆ ಖಾಸಗಿ ಶಾಲೆಗಳ ಮಾಲೀಕರು ಹಫ್ತಾ ನೀಡುತ್ತಾರೆ ಎಂದು ಭಾವಿಸಿದ್ದ.