ಬೆಂಗಳೂರು: ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ(ಎನ್‌ಡಿಪಿಎಸ್) ಅಕ್ರಮ ಪ್ರಕರಣಗಳಲ್ಲಿ ಗಾಂಜಾ ಪ್ರಮಾಣ ನಿರ್ಧರಿಸುವ ಸಂದರ್ಭಗಳಲ್ಲಿ ಎಲೆ, ಬೀಜಗಳನ್ನು ತೂಕ ಮಾಡಿ ಪರಿಗಣಿಸಬೇಕು ಎಂದು ಹೈಕೋರ್ಟ್ನ ಏಕಸದಸ್ಯಪೀಠ ಹೇಳಿದೆ.
ದಾವಣಗೆರೆಯ ಜಿಲ್ಲೆಯ ಚನ್ನಗಿರಿಯ ಕಾಶೆಟ್ಟಿಹಳ್ಳಿಯ 73 ವರ್ಷದ ರಂಗಪ್ಪ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಎನ್‌ಡಿಪಿಎಸ್ ಕಾಯ್ದೆಯಡಿ ಗಾಂಜಾ ಹೊಂದಿದ್ದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ವಿರುದ್ಧದ ಪ್ರಕರಣ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.
ನಾವು ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ, ನಿಷೇಧ ಕಾಯ್ದೆ (ಎನ್‌ಡಿಪಿಎಸ್) ಸೆಕ್ಷನ್2(2)(ಬಿ) ರಡಿ ವ್ಯಾಖ್ಯಾನವನ್ನು ಓದಿದರೆ ಗಾಂಜಾದಲ್ಲಿ ಬೀಜಗಳು ಮತ್ತು ಹೂವುಗಳನ್ನು ಹೊರಗಿಡಲಾಗಿದೆ. ಆದರೆ ಪಂಚನಾಮೆ ವರದಿಯಲ್ಲಿ ಅರ್ಜಿದಾರರಿಂದ ವಶಪಡಿಸಿಕೊಂಡಿರುವ ಗಾಂಜಾದ ಜತೆ ಬೀಜ, ಹೂವು ಮತ್ತು ಎಲೆ ಕೂಡ ಸೇರಿದೆ. ಆದ್ದರಿಂದ ಅವುಗಳ ತೂಕವನ್ನೂ ಸಹ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಪೀಠ ತಿಳಿಸಿದೆ.
ಅಲ್ಲದೆ, ಎಫ್ಎಸ್ಎಲ್ ವರದಿ ಅರ್ಜಿದಾರರ ವಿರುದ್ಧ ಇರುವ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಅರ್ಜಿದಾರರಿಂದ ವಶ ಪಡಿಸಿಕೊಂಡಿರುವ ಮಾದಕ ವಸ್ತುಗಳಲ್ಲಿ ಗಾಂಜಾ ತೂಕ ನಿರ್ಧರಿಸುವಾಗ ಗಾಂಜಾ ಗಿಡದ ಬೀಜ, ಎಲೆ, ಹೂವುಗಳ ತೂಕವನ್ನೂ ಸೇರಿಸಬೇಕು. ಆ ರೀತಿ ಸೇರಿಸಿದರೆ ಗಾಂಜಾ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಾಗಿದ್ದು, ಹಾಗಾಗಿ ಜಾಮೀನು ನೀಡಲಾಗದು ಎಂದು ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ ಏನು:2019ರಲ್ಲಿ ಪೊಲೀಸರು ರಂಗಪ್ಪ ಅವರನ್ನು ಬಂಧಿಸಿ 750 ಗ್ರಾಂ ಗಾಂಜಾ ವಶಪಡಿಸಿಕೊಂಡು ಎನ್‌ಡಿಪಿಎಸ್ ಕಾಯ್ದೆಯಡಿ ಪೊಲೀಸರು ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಅರ್ಜಿದಾರರು, ಗಾಂಜಾ ಗಿಡದ ಬೀಜ, ಎಲೆಯನ್ನು ತೂಕಕ್ಕೆ ಪರಿಗಣಿಸಬಾರದು. ಅವುಗಳನ್ನು ಪರಿಗಣಿಸದಿದ್ದರೆ ವಶಪಡಿಸಿಕೊಂಡಿರುವ ಗಾಂಜಾ ಪ್ರಮಾಣ ಎನ್‌ಡಿಪಿಎಸ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಒಳನುಸುಳಲು ಯತ್ನಿಸುತ್ತಿದ್ದ ಪಾಕ್ ಕಳ್ಳಸಾಗಾಣಿಕೆದಾರರ ಮೇಲೆ ಫೈರಿಂಗ್: 25 ಕೆಜಿ ಹೆರಾಯಿನ್ ಜಪ್ತಿ