ಬೆಂಗಳೂರು:ಬೆಳಗಾವಿಯ ಜಿಲ್ಲೆಯ ಗ್ರಾಮಯೊಂದರಲ್ಲಿ ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಖಂಡಿಸಿ ಬೆಂಗಳೂರು ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ, ಸಂಸದ ಡಿ ವಿ ಸದಾನಂದಗೌಡ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ನೇತೃತ್ವದಲ್ಲಿ ಇಂದು ಮೇಖ್ರಿ ಸರ್ಕಲ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಸ್ಗಳಲ್ಲಿ ಕರೆದೊಯ್ದರು.
ರಾಜ್ಯದಲ್ಲಿ ಹದಗೆಟ್ಟ ಕಾನೂನು, ಸುವ್ಯವಸ್ಥೆ- ಮಾಜಿ ಸಿಎಂ ಆರೋಪ:ಮಾಜಿ ಸಿಎಂ ಡಿ ವಿ ಸದಾನಂದಗೌಡ ಮಾತನಾಡಿ, ''ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರ ಮಾಡಿ, ಹಲ್ಲೆ ನಡೆಸಿ ಮೆರವಣಿಗೆ ಮಾಡಿರುವ ಘಟನೆಯನ್ನು ಯಾರು ಕೂಡ ಸಹಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟು ಹೋಗಿದೆ'' ಎಂದು ಆಕ್ಷೇಪ ವ್ಯಕ್ತಪಡಿಸಿದರು.
''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿರುವುದರಿಂದ ನಾವು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಪೊಲೀಸರು ಇಲ್ಲಿ ಪ್ರತಿಭಟನೆ ಮಾಡಬಾರದು ಎಂದು ಹೇಳಿದ್ದಾರೆ. ಇಷ್ಟು ಕೆಟ್ಟ ಆಡಳಿತವನ್ನು ನನ್ನ ಜೀವನದಲ್ಲೇ ನೋಡಿಲ್ಲ. ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗಿದೆ'' ಎಂದು ಟೀಕಿಸಿದರು.