ಬೆಂಗಳೂರು:ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರನ್ನು ಹೋಲುವ ಫೊಟೋಗಳನ್ನು ಮಹಿಳೆಯ ಫೊಟೋದೊಂದಿಗೆ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿರುವ ಬಗ್ಗೆ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕರ ಆಪ್ತ ಸಹಾಯಕ ವಸಂತ್ ಎಸ್. ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರ ಫೊಟೋವನ್ನು ಮಹಿಳೆಯೊಬ್ಬರ ಫೊಟೋದೊಂದಿಗೆ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದು ಶಾಸಕರ ಗೌರವಕ್ಕೆ ಚ್ಯುತಿ ಉಂಟು ಮಾಡುತ್ತಿದೆ. ಆದ್ದರಿಂದ ಮಾನಹಾನಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಮಹಿಳೆಯಿಂದಲೂ ದೂರು :ಈ ಬಗ್ಗೆ ಫೋಟೊದಲ್ಲಿರುವಮಹಿಳೆಯೂ ಸಹ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಪುತ್ತೂರು ಶಾಸಕರೊಂದಿಗೆ ನನ್ನ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇದರಿಂದಾಗಿ ತನ್ನ ಮಾನಹಾನಿಯಾಗಿದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಾಗಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವಿಕ್ರಂ ಅಮಟೆ ಮಾಹಿತಿ ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಮಹಿಳೆಯು ವಿಡಿಯೋ ಹೇಳಿಕೆ ಕೂಡಾ ಬಿಡುಗಡೆ ಮಾಡಿದ್ದಾರೆ. ''ನನ್ನ ವೈಯಕ್ತಿಕ ಪೊಟೋಗಳನ್ನು ಎಡಿಟ್ ಮಾಡಿಕೊಂಡು ಪುತ್ತೂರು ಶಾಸಕರ ಜೊತೆಗೆ ಹೊಂದಾಣಿಕೆ ಮಾಡಿ ವೈರಲ್ ಮಾಡಲಾಗಿದೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ. ನನ್ನ ಮೇಲೆ ಈ ರೀತಿ ದೌರ್ಜನ್ಯ ನಡೆಸಲಾಗುತ್ತಿದೆ. ನನಗೆ ಮತ್ತು ಶಾಸಕರಿಗೆ ಯಾವುದೇ ರೀತಿಯ ಸಂಬಂಧ ಇಲ್ಲ. ಈ ಹಿಂದೆ ಕೂಡ ಭೇಟಿ ಮಾಡುವ ಪ್ರಸಂಗ ಬಂದಿಲ್ಲ. ಫೋಟೊ ಎಡಿಟ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ'' ಎಂದು ವಿಡಿಯೋದಲ್ಲಿ ಅವರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ದೇವನಹಳ್ಳಿ: ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಹೂವು ಬೆಳೆಗಾರ ಸಾವು