ಬೆಂಗಳೂರು: ಮದ್ಯದ ಅಮಲಿನಲ್ಲಿ ದುರ್ವರ್ತನೆ ಪ್ರದರ್ಶಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 25ರಂದು ರಾತ್ರಿ ಅಪಾಯಕಾರಿಯಾಗಿ ಕಾರು ಚಲಾಯಿಸಿಕೊಂಡು ಬಂದು ರಾಹುಲ್ ಎಂಬಾತನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಆರೋಪದ ಕುರಿತು ಪ್ರಕರಣ ದಾಖಲಾಗಿದೆ. ಅಕ್ಟೋಬರ್ 25ರಂದು ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿತ್ತು.
ಪೊಲೀಸರಿಗೆ ಕೊಟ್ಟ ದೂರಿನಲ್ಲಿರೋದು ಹೀಗೆ: ’’ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಚಾಲನೆ ಮಾಡುತ್ತಿದ್ದ ಆ್ಯಡಂ ಕಂಡು ಹಿಂದಿನಿಂದ ನನ್ನ ಕಾರಿನಲ್ಲಿ ಬರುತ್ತಿದ್ದ ನಾನು ಹಾರ್ನ್ ಮಾಡಿ ಮುಂದೆ ತೆರಳಿದ್ದೆ. ಅಷ್ಟಕ್ಕೇ ನನ್ನ ಕಾರು ಓವರ್ ಟೇಕ್ ಮಾಡಿಕೊಂಡು ಬಂದ ಆ್ಯಡಂ, ಯಲಹಂಕದ ರೈಲ್ವೆ ವೀಲ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಗಲಾಟೆ ಮಾಡಿದ್ದರು. ಆಗ ನಾನು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದೆ. ಸ್ಥಳಕ್ಕೆ ಬಂದ ಪೊಲೀಸರೊಂದಿಗೂ ಸಹ ಆ್ಯಡಂ ಬಿದ್ದಪ್ಪ ವಾಗ್ವಾದ ನಡೆಸಿದ್ದರು. ಜೊತೆಗೆ ನನಗೆ ಪ್ರಭಾವಿ ವ್ಯಕ್ತಿಗಳು ಗೊತ್ತು ಎಂದು ಆ್ಯಡಂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ರಾಹುಲ್ ಆರೋಪಿಸಿದ್ದಾರೆ. ರಾಹುಲ್ ಸಹಾಯವಾಣಿಗೆ ಕರೆ ಮಾಡಿದ ಆಧಾರದ ಮೇಲೆ ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರು ಆ್ಯಡಂನ ಕಾರು ವಶಕ್ಕೆ ಪಡೆದಿದ್ದಾರೆ.