ಬೆಂಗಳೂರು : ಪ್ರತಿಷ್ಠಿತ ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಹಿಂದೆ ಬಿದ್ದು ಲವ್ ಮಾಡುವಂತೆ ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯೊಬ್ಬನ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಮಾರಿಯಪ್ಪನ್ ಎಂಬಾತನ ವಿರುದ್ದ ಎಫ್ಐಆರ್ ದಾಖಲಾಗಿದೆ.
ಉತ್ತರ ಭಾರತ ಮೂಲದ ಯುವತಿ ಕೆಲ ವರ್ಷಗಳಿಂದ ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಮಾರಿಯಪ್ಪನ್ ಎಂಬಾತ ಯುವತಿಯನ್ನು ಹೇಗೋ ಪರಿಚಯಿಸಿಕೊಂಡು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಅಷ್ಟೇ ಅಲ್ಲದೆ ರೋಜ್ ಕೊಟ್ಟು ಪ್ರಪೋಸ್ ಕೂಡ ಮಾಡಿದ್ದ. ಆದರೆ ಯುವತಿ ಮಾತ್ರ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿ ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಇದರಿಂದ ಬೇಸತ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಬಳಿಕ ಆರೋಪಿ ಮಾರಿಯಪ್ಪನ್ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.
ಇದಾದ ಬಳಿಕ ಜಾಮೀನಿನ ಮೇಲೆ ಹೊರಬಂದ ಮಾರಿಯಪ್ಪನ್, ಮತ್ತೆ ಐ ಲವ್ ಯು, ಮ್ಯಾರಿ ಮಿ ಎಂದು ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಜೊತೆಗೆ ಕೆಲಸದಿಂದ ಬರುವಾಗ ಯುವತಿಯ ಸ್ಕೂಟಿ ಅಡ್ಡಗಟ್ಟಿ ಲವ್ ಮಾಡು ಎಂದು ಪೀಡಿಸಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಸ್ಕೂಟಿಯನ್ನು ಎಳೆದಾಡಿದ್ದಾನೆ. ಈ ಸಂಬಂಧ ಯುವತಿಯು ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿ ವಿರುದ್ದ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.