ಕರ್ನಾಟಕ

karnataka

ETV Bharat / state

ಕಾರಜೋಳ ಕಾರಿನ ಮೇಲೆ ದಾಳಿ ಆರೋಪ: ಸಚಿವ ತಿಮ್ಮಾಪುರ ಬೆಂಬಲಿಗರ ವಿರುದ್ಧ ಇದ್ದ ಪ್ರಕರಣ ರದ್ದು - case against supporters of Minister Thimmapur

ಉಮೇಶ್​ ಕಾರಜೋಳ ಕಾರಿನ ಮೇಲೆ ದಾಳಿ, ಹಲ್ಲೆ ಆರೋಪ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಈ ತೀರ್ಪು ನೀಡಿದೆ.

Special Court of Representatives
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

By ETV Bharat Karnataka Team

Published : Dec 19, 2023, 4:51 PM IST

ಬೆಂಗಳೂರು:2013ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಮಗ ಉಮೇಶ್ ಕಾರಜೋಳ ಕಾರಿನ ಮೇಲೆ ದಾಳಿ ನಡೆಸಿದ ಆರೋಪದ ಹಿನ್ನೆಲೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಮತ್ತು ಅವರ 14 ಜನ ಬೆಂಬಲಿಗರ ವಿರುದ್ಧ ಇದ್ದ ಪ್ರಕರಣವನ್ನು ಇಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶ ಜೆ. ಪ್ರೀತ್ ಅವರು ಈ ತೀರ್ಪು ಪ್ರಕಟಿಸಿದರು. ನ್ಯಾಯಾಲಯ ನೀಡಿದ ಈ ತೀರ್ಪಿನಿಂದ ತಿಮ್ಮಾಪುರ ಹಾಗೂ ಮತ್ತವರ ಬೆಂಬಲಿಗರು ಸದ್ಯ ನಿರಾಳರಾಗಿದ್ದಾರೆ. ವಿಚಾರಣೆ ವೇಳೆ ತಿಮ್ಮಾಪುರ ಪರ ವಕೀಲ ಸಂಕೇತ್ ಏಣಗಿ ಅವರು ವಾದ ಮಂಡಿಸಿ, ಪ್ರಕರಣ ಸಂಬಂಧ ಆರೋಪಿಗಳು ಕಾನೂನು ಬಾಹಿರವಾಗಿ ಸಭೆ ನಡೆಸಿದ್ದಾರೆ ಎಂಬುದಾಗಿ ಪ್ರಾಸಿಕ್ಯೂಷನ್ ಆರೋಪಿಸಿದೆ. ಆದರೆ ಈ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಪ್ರಾಸಿಕ್ಯೂಷನ್‌ ಎಲ್ಲ ಆರೋಪಗಳು ಅನುಮಾನದಿಂದ ಕೂಡಿದ್ದು, ಈ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು ?:2013ರ ವಿಧಾನಸಭೆಯ ಚುನಾವಣೆಯ ಹಿಂದಿನ ದಿನ ಮುಧೋಳದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಮಗ ಉಮೇಶ್ ಕಾರಜೋಳ್ ಕಾರಿನ ಮೇಲೆ ಆರ್ ಬಿ ತಿಮ್ಮಾಪುರ ಮತ್ತವರ ಬೆಂಬಲಿಗರು ದಾಳಿ ನಡೆಸಿ ಗಂಭೀರ ಹಲ್ಲೆ ಮಾಡಿರುವ ಕುರಿತು ಆರೋಪ ಮಾಡಲಾಗಿತ್ತು.

ಆರೋಪ ಸಂಬಂಧ ಸಚಿವ ಆರ್. ಬಿ. ತಿಮ್ಮಾಪುರ ಹಾಗೂ ಅವರ ಬೆಂಬಲಿಗರ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ ಆರೋಪದಡಿ ದೂರು ದಾಖಲಾಗಿತ್ತು. ಈ ಸಂಬಂಧ ಸಚಿವರು ಮತ್ತವರ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 143 ,147 ,341 ,336,427 ಹಾಗೂ149 ರ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಇದೀಗ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಇದನ್ನೂಓದಿ:ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ 2 ವಾರಗಳಲ್ಲಿ ಪೂರ್ಣ: ಹೈಕೋರ್ಟ್​ಗೆ ಸರ್ಕಾರದ ಭರವಸೆ

ABOUT THE AUTHOR

...view details