ಬೆಂಗಳೂರು:ಕಾನೂನು ಪಾಲಿಸಬೇಕಾದ ಪೊಲೀಸರೇ ನಿಯಮಗಳನ್ನು ಗಾಳಿಗೆ ತೂರಿ ಅಮಾಯಕನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ ಆರೋಪ ಕೇಳಿ ಬಂದಿದೆ. ಆರ್ಎಂಸಿ ಯಾರ್ಡ್ ಠಾಣೆಯ ಸಬ್ಇನ್ಸ್ಸ್ಪೆಕ್ಟರ್ ಆಂಜಿನಪ್ಪ ಹಾಗೂ ಇನ್ಸ್ಸ್ಪೆಕ್ಟರ್ ಪಾರ್ವತಮ್ಮ ವಿರುದ್ಧ ಗಂಭೀರ ಆಪಾದನೆ ಮಾಡಲಾಗಿದೆ. ಮತ್ತೊಂದೆಡೆ ಸುಳ್ಳು ಕೇಸಿಗೆ ಹೆದರಿದ ಬೀದಿ ಬದಿ ವ್ಯಾಪಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಈ ಸಂಬಂಧ ಮಾಹಿತಿ ಸಂಗ್ರಹಿಸಿದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಆಂತರಿಕ ತನಿಖೆ ನಡೆಸಿ ಇಂದು ಅಥವಾ ನಾಳೆಯೊಳಗೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ವರದಿ ನೀಡಲಿದ್ದಾರೆ. ಮೇಲ್ನೋಟಕ್ಕೆ ಆರೋಪ ಸಾಬೀತಾದರೆ ಇಬ್ಬರನ್ನೂ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ.
ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್ ಕಳೆದ ಶನಿವಾರ ಮನೆ ಮುಂದೆ ಸ್ನೇಹಿತರೊಂದಿಗೆ ಮೊಬೈಲ್ನಲ್ಲಿ ಲೂಡೊ ಗೇಮ್ ಆಡುವಾಗ ರೌಂಡ್ಸ್ಗೆ ಬಂದಿದ್ದ ಇನ್ಸ್ಸ್ಪೆಕ್ಟರ್ ಪಾರ್ವತಮ್ಮ ಗಾಂಜಾ ಸೇವನೆ ಆರೋಪ ಹೊರಿಸಿ ಆತನನ್ನು ಠಾಣೆಗೆ ಕರೆತಂದಿದ್ದಾರೆ. ಪಿಎಸ್ಐ ಆಂಜಿನಪ್ಪ ವಿಚಾರಣೆ ವೇಳೆ ಶಿವರಾಜ್ಗೆ ಸಿಗರೇಟಿನಲ್ಲಿ ಗಾಂಜಾ ಸೇವಿಸುವಂತೆ ಒತ್ತಡ ಹಾಕಿದ್ದಾರೆ. ಸಿಗರೇಟು ಸೇದಿದರೆ ಬಿಡುವುದಾಗಿ ಆಮಿಷವೊಡ್ಡಿ ಸೇದುವಂತೆ ಮಾಡಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಮಾದಕ ವಸ್ತು ಸೇವನೆ ಆರೋಪ ಹೊರಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್ ಪೊಲೀಸರ ನಡತೆಯಿಂದ ಬೇಸರಗೊಂಡು ಸಮಾಜಕ್ಕೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಮನೆಯವರು ಆಸ್ಪತ್ರೆ ಸೇರಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್, ನಡೆದ ಘಟನೆಗಳ ಬಗ್ಗೆ ಮಾತನಾಡಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಟುಂಬಸ್ಥರು, ಗಾಂಜಾ ಸೇವನೆ ಆರೋಪದಡಿ ಸುಳ್ಳು ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.