ಬೆಂಗಳೂರು:ಕಾರ್‌ಪೂಲಿಂಗ್ ನಿಷೇಧಿಸಲಾಗಿದೆ ಎನ್ನುವುದು ಸುಳ್ಳು ಸುದ್ದಿ. ಕಾರ್‌ಪೂಲಿಂಗ್ ನಿಷೇಧಿಸಿಲ್ಲ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅನುಮತಿ ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ವೈಟ್ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನು ಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್‌ಪೂಲಿಂಗ್‌ಗೆ ಬಳಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕಾರ್‌ಪೂಲಿಂಗ್ ನಿಷೇಧಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಸಚಿವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಸ್ಪಷ್ಟನೆ ನೀಡಿದ್ದಾರೆ. ಕಾರ್‌ಪೂಲಿಂಗ್ ನಿಷೇಧಿಸಿಲ್ಲ. ಸೂಕ್ತ ಮಾರ್ಗಸೂಚಿ ಅನುಸರಿಸಿ ಕಾರ್‌ಪೂಲಿಂಗ್ ಬಳಸಬಹುದು ಎಂದು ತಿಳಿಸಿದ್ದಾರೆ.
ಕಾರ್‌ಪೂಲಿಂಗ್ ಕುರಿತು ಸಿಎಂಗೆ ಸಂಸದ ತೇಜಸ್ವಿ ಸೂರ್ಯ ಪತ್ರ:ರಾಜ್ಯ ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುವುದನ್ನು ತಡೆಯಲು ಪೂರಕವಾಗಿ ಕಾರ್‌ಪೂಲಿಂಗ್ ಸೇವೆಗಳ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ಹಾಗೂ ಪ್ರಸ್ತುತ ಇರುವ ಮೋಟಾರು ವಾಹನ ಕಾಯ್ದೆಯನ್ನು ಕಾಲಕ್ಕೆ ತಕ್ಕ ರೀತಿ ನವೀಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು.
ಬೆಂಗಳೂರಿನಲ್ಲಿ 1990 ರಿಂದ ಈಚೆಗೆ ವಾಹನಗಳ ಸಂಖ್ಯೆಯಲ್ಲಿ ಶೇ. 6,000 ಹೆಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಪ್ರತಿದಿನ 1,750 ಹೊಸ ವಾಹನಗಳು ಬೆಂಗಳೂರಿನ ರಸ್ತೆಗೆ ಬರುತ್ತಿವೆ. ಪೀಕ್ ಅವರ್‌ಗಳಲ್ಲಿ ಸರಾಸರಿ ವಾಹನದ ವೇಗ ಗಂಟೆಗೆ 15 ಕಿ.ಮೀ. ಆಗಿದೆ. ಒಟ್ಟಾರೆಯಾಗಿ, ವಾಹನಗಳ ಬಳಕೆ ಪ್ರಯಾಣದಲ್ಲಿ ಕಳೆದುಹೋದ ಮಾನವ-ಗಂಟೆಗಳ ಟ್ರಾಫಿಕ್ ಜಾಮ್ ಮತ್ತು ಅದರ ಸಂಬಂಧಿತ ಮಾನಸಿಕ ಪ್ರಭಾವದಿಂದ ಬೆಂಗಳೂರಿಗೆ 1 ಬಿಲಿಯನ್ ಡಾಲರ್ ನಷ್ಟವನ್ನು ಉಂಟುಮಾಡುತ್ತದೆ. ನಗರದ ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿದಂತೆ, ಬಿಎಂಟಿಸಿ 6,763 ಬಸ್ ರಸ್ತೆಗಿಳಿಸಿದೆ, ಆದರೆ 1.10 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನ ಬೇಡಿಕೆಗಳನ್ನು ಪೂರೈಸಲು ಫ್ಲೀಟ್ ಗಾತ್ರವು ಸಾಕಾಗುವುದಿಲ್ಲ. ನಗರಕ್ಕೆ ವಿವಿಧ ಗಾತ್ರದ ಸುಮಾರು 6,000 ಹೆಚ್ಚುವರಿ ಬಸ್‌ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ, ರೈಡ್ ಶೇರ್ ಮತ್ತು ಕಾರ್‌ಪೂಲಿಂಗ್‌ಗಳು ಸಂಚಾರ ದಟ್ಟಣೆಯ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ತಕ್ಷಣದ ಮತ್ತು ಸೂಕ್ತವಾದ ಪರಿಹಾರಗಳಾಗಿವೆ ಎಂದು ಪತ್ರದಲ್ಲಿ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದರು.