ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ನಿರ್ವಹಣೆ ಕುರಿತಂತೆ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ಸಹ ಹಿಂದಿನ ಗುತ್ತಿಗೆದಾರರೇ ಸೇವೆ ಮುಂದುವರಿಸಲು ಅವಕಾಶ ನೀಡಿ ಏಕ ಸದಸ್ಯಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ರಾತ್ರಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ವಿಶೇಷ ವಿಭಾಗೀಯ ಪೀಠ, ಏಕ ಸದಸ್ಯಪೀಠ ನೀಡಿರುವ ಆದೇಶ ಊರ್ಜಿತವಾಗುವುದಿಲ್ಲ. ಆದ್ದರಿಂದ ಅದನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ, ಏಕ ಸದಸ್ಯಪೀಠ ತನ್ನ ವ್ಯಾಪ್ತಿಯನ್ನು ಮೀರಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು ಎಂದು ಕೋರಿದರು. ಅವರ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.