ಯಲಹಂಕ ( ಬೆಂಗಳೂರು) : ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಮೂವರಿಗೆ ವ್ಯಕ್ತಿಯೊಬ್ಬ ಕಾರಿನಿಂದ ಡಿಕ್ಕಿ ಹೊಡೆಸಿದ ಆರೋಪ ಯಲಹಂಕ ತಾಲೂಕಿನ ಚಲ್ಲಹಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ರಾಮಯ್ಯ ಮತ್ತು ನಾಗರಾಜು ಎಂದು ಗುರುತಿಸಲಾಗಿದೆ. ಮತ್ತೋರ್ವ ಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಚಲ್ಲಹಳ್ಳಿ ಗ್ರಾಮದವರಾಗಿದ್ದು ಇಂದು ಬೆಳಗ್ಗೆ 6.30ರ ಸಮಯಕ್ಕೆ ಒಂದೇ ಸ್ಕೂಟರ್ನಲ್ಲಿ ರಾಜಾನುಕುಂಟೆ ಬಳಿಯ ಕೆಎಂಎಫ್ ನ ಪಶು ಆಹಾರ ತಯಾರಿಕ ಘಟಕಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದರು. ಈ ವೇಳೆ ಕಾಕೋಳು ಗ್ರಾಮದ ಸಮೀಪ ಅತಿವೇಗವಾಗಿ ಬಂದ ಕಾರು ಸ್ಕೂಟರ್ ಗೆ ಮುಂಭಾಗದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಸಹ ಚಿಂತಾಜನಕವಾಗಿದೆ. ಮಕ್ಕಳ ಸಾವಿನ ಸುದ್ದಿ ಕೇಳಿ ಮೃತರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಉದ್ದೇಶಪೂರ್ವಕವಾಗಿ ಕೃತ್ಯ ಆರೋಪ : ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಇಬ್ಬರ ಸಾವಿಗೆ ಯಲಹಂಕ ತಾಲೂಕಿನ ಹನಿಯೂರು ಗ್ರಾಮದ ಭರತ್ ಎಂಬಾತ ಕಾರಣ ಎಂದು ದೂರಿದ್ದಾರೆ. 15 ದಿನಗಳ ಹಿಂದೆ ಮೃತ ನಾಗರಾಜು ರಾಜಯಕೀಯ ಪಕ್ಷವೊಂದರ ರ್ಯಾಲಿಗಾಗಿ ಹೆಸರಘಟ್ಟಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ದಲಿತ ಕುಟುಂಬಕ್ಕೆ ಸೇರಿದ ನಾಗರಾಜು ಹೋಟೆಲ್ವೊಂದರಲ್ಲಿ ಹೋಗಿ ನೀರು ಕುಡಿದಿದ್ದರು. ಈ ವೇಳೆ ಸವರ್ಣೀಯ ಭರತ್ ಮತ್ತು ಕೆಲವರು, ನಾಗರಾಜುವಿನಲ್ಲಿ ನೀನು ಕುಡಿದ ನೀರನ್ನು ನಾನು ಕುಡಿಯ ಬೇಕಾ ಎಂದು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ಈ ಕೂಡಲೇ ನಾಗರಾಜು ಸಂಬಂಧಿ ವೆಂಕಟೇಶ್ ಅವರಿಗೆ ಕರೆ ಮಾಡಿ ಹೇಳಿದ್ದಾರೆ. ಈ ವೇಳೆ ನಾಗರಾಜುಗೆ ಬೆದರಿಕೆ ಹಾಕಿ, ನಿನಗೆ ಒಂದು ಗತಿ ಕಾಣಿಸುವುದಾಗಿ ಹೇಳಿದ್ದ ಎಂದು ಮೃತರ ಸಂಬಂಧಿ ವೆಂಕಟೇಶ್ ಆರೋಪಿಸಿದ್ದಾರೆ.