ರಾಮನಗರ :ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಪಲ್ಟಿ ಹೊಡೆದ ಪರಿಣಾಮ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಬೆಂಗಳೂರಿಂದ ಅತಿ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತವಾಗಿದೆ. ಮೃತರ ಹೆಸರುಗಳು ಇನ್ನು ತಿಳಿದು ಬಂದಿಲ್ಲ. ಕಾರು ಅತಿಯಾದ ವೇಗವಾಗಿ ಬಂದ ಹಿನ್ನೆಲೆ ಪಲ್ಟಿಯಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದರು ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ :ಊಟಿಯಲ್ಲಿ ಕಾರು ಪಲ್ಟಿ.. ನರಸಿಂಹರಾಜ ವಿಧಾನಸಭಾ ಕ್ಷೇತ್ರ ಬಿಜೆಪಿ ಮುಖಂಡ ಇನ್ನಿಲ್ಲ
ಓರ್ವ ಗಾಯಾಳುವಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇನ್ನು, ಘಟನಾ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.
ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲೂ ಅಪಘಾತ :ಇಂದು (ಭಾನುವಾರ) ನಸುಕಿನ ಜಾವದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಎರ್ಟಿಗಾ ಕಾರು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಬಳಿಯ ಹೊಳೆಗೆ ಉರುಳಿ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಹೊಸೂರು ನಿವಾಸಿ ಹರಿಪ್ರಸಾದ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ನೀರಿನಲ್ಲಿ ಮುಳುಗಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಕೊಂಡಿದ್ದಾರೆ.
ಮೈಸೂರು ಬಳಿ ಭೀಕರ ರಸ್ತೆ ಅಪಘಾತ; 11 ಮಂದಿ ಮೃತ : ಮೈಸೂರಿನ ತಿ. ನರಸೀಪುರ ಹಾಗು ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ಇತ್ತೀಚೆಗೆ ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಡಿಕ್ಕಿ ಸಂಭವಿಸಿ ಭೀಕರವಾಗಿ 11 ಜನ ಮೃತಪಟ್ಟಿದ್ದರು. ಈ ರಸ್ತೆ ಅಪಘಾತದಲ್ಲಿ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ 10 ಜನ ಸದಸ್ಯರ ಸಾವನ್ನಪ್ಪಿದ್ದರು. ಪ್ರವಾಸಕ್ಕೆಂದು ಬಳ್ಳಾರಿಯಿಂದ ಮೈಸೂರಿಗೆ ಕುಟುಂಬಸ್ಥರು ತೆರಳಿದ್ದ ವೇಳೆ ದುರಂತ ಸಂಭವಿಸಿತ್ತು. ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ, ಮೃತರ ಕುಟುಂಬಸ್ಥರಿಗೆ ಪರಿಹಾರ ಕೂಡ ಘೋಷಿಸಿದ್ದರು.
ಇದನ್ನೂ ಓದಿ :Dharwad accident: ಧಾರವಾಡ ಬಳಿ ಲಾರಿ-ಕಾರು ಅಪಘಾತ; ಸ್ಥಳದಲ್ಲೇ ಮೂವರು ಸಾವು