ಬೆಂಗಳೂರು:ಸಾರಿಗೆ ಇಲಾಖೆಯ ನೌಕರರು ಜನಹಿತ ಗಮನಿಸಿ ಮುಷ್ಕರ ಕೈಬಿಡಬೇಕು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರ ಒಟ್ಟು 9 ಬೇಡಿಕೆಗಳ ಪೈಕಿ ಎಂಟನ್ನು ಈಗಾಗಲೇ ಈಡೇರಿಸಲಾಗಿದೆ. ಇನ್ನೊಂದು ಬೇಡಿಕೆಯ ಕುರಿತು ಪರಿಶೀಲಿಸಿ ರಾಜ್ಯದ ಉಪ ಚುನಾವಣಾ ಪ್ರಕ್ರಿಯ ಮುಗಿದ ಬಳಿಕ ನಿರ್ಧರಿಸುವುದಾಗಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇದನ್ನು ಗಮನಿಸಿ ನೌಕರರು ಕೂಡಲೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಪ್ರಸ್ತುತ ಪರೀಕ್ಷೆಯ ಸಮಯವಾಗಿದ್ದು, ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಮತ್ತು ಆತಂಕ ಎದುರಿಸಬೇಕಾಗುತ್ತದೆ. ಕೊರೊನಾ ಲಾಕ್‍ಡೌನ್ ಸಮಸ್ಯೆಯಿಂದ ಆರ್ಥಿಕ ಸಂಕಷ್ಟ ಎದುರಿಸಿದ ಅಸಂಖ್ಯಾತ ಬಡ ಕಾರ್ಮಿಕರು ತಮ್ಮ ಕೆಲಸಕಾರ್ಯ ನಿರ್ವಹಣೆಗೆ ಅಸಾಧ್ಯವಾಗಿ ಅವರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಉಪ ಚುನಾವಣೆಯ ಸಂದರ್ಭ ಬಸ್ಸುಗಳ ಸೇವೆಯು ಚುನಾವಣಾ ಕೆಲಸ ಕಾರ್ಯಗಳಿಗೆ ಅತ್ಯಗತ್ಯವಾಗಿದೆ. ಮುಷ್ಕರದಿಂದ ಚುನಾವಣಾ ಪ್ರಕ್ರಿಯೆಗೂ ತೊಡಕಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರಿಗೆ ಇಲಾಖೆ ನೌಕರರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು ಎಂದು ಅವರು ವಿನಂತಿಸಿದ್ದಾರೆ.
ಹಿಂದಿನ ಅನೇಕ ವರ್ಷಗಳಿಂದ ಸಾರಿಗೆ ಸಂಸ್ಥೆಗಳ ನೌಕರರಾದ ನೀವು ನಾಡಿನ ಜನತೆಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮನವಿಯನ್ನು ಪರಿಗಣಿಸಿ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ಕಾರ್ಣಿಕ್ ವಿನಂತಿಸಿದ್ದಾರೆ.