ಬೆಂಗಳೂರು :ಸರ್ಕಾರದ ಗೊಂದಲಗಳು, ನಾಯಕತ್ವ ಬದಲಾವಣೆ ಹೇಳಿಕೆಗಳ ಬಗ್ಗೆ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಪಕ್ಷ ಸಂಘಟನೆಯ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು, ಕೋವಿಡ್ ಇದ್ದ ಕಾರಣ ಕಳೆದ ನಾಲ್ಕೈದು ತಿಂಗಳಿಂದ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಲು ಆಗಿರಲಿಲ್ಲ. ಹೀಗಾಗಿ, ಇಂದು ಆ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ.
ಮುಂದೆ ಡಿಸೆಂಬರ್ನಲ್ಲಿ ಬರಲಿರುವ ತಾಲೂಕು,ಜಿಲ್ಲಾ ಪಂಚಾಯತ್ ಚುನಾವಣಾ ತಯಾರಿ,ಎರಡು ಉಪಚುನಾವಣೆ ಕುರಿತು ಚರ್ಚೆ ಮಾಡಲಾಗಿದೆ ಎಂದರು. ಕೋವಿಡ್ ವ್ಯಾಕ್ಸಿನೇಷನ್ ಕಾರ್ಯವನ್ನು ಯಶಸ್ವಿ ಮಾಡುವ ಬಗ್ಗೆ ಚರ್ಚೆ ನಡೆಸಿದ್ದು, 3ನೇ ಅಲೆ ತಡೆಗೆ ಪಕ್ಷದಿಂದ ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದರು.