ಬೆಂಗಳೂರು:ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005 ಅಡಿ ಪತಿಯಿಂದ ದೂರವಿರುವ ಮಹಿಳೆಗೆ ನಿಗದಿಪಡಿಸಿದ ಜೀವನಾಂಶವನ್ನು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 127ರ ಅಡಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಪತ್ನಿಗೆ ನೀಡುತ್ತಿದ್ದ ಜೀವನಾಂಶವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಿ ಕಲಘಟಗಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶ ಹಾಗೂ ಈ ಆದೇಶವನ್ನು ಪುರಸ್ಕರಿಸಿರುವ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ರದ್ದು ಕೋರಿ ಶಿವಾನಂದ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ-2005ರ ಸೆಕ್ಷನ್ 12ರ ಅಡಿ ಪತ್ನಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆಯೇ ಹೊರತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 125ರ ಅಡಿ ಪರಿಹಾರ ಕೇಳಿಲ್ಲ. ಸಿಆರ್ಪಿಸಿ ಸೆಕ್ಷನ್ 125ರ ಅಡಿ ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ್ದಾಗ ಮಾತ್ರ ಸಿಆರ್ಪಿಸಿ ಸೆಕ್ಷನ್ 127ರ ಅಡಿ ಜೀವನಾಂಶ ಪರಿಷ್ಕರಣೆಗೆ ಕೋರಬಹುದು. ಆದರೆ ಪತ್ನಿ ಡಿವಿ ಆ್ಯಕ್ಟ್ 12ರ ಅಡಿ ಜೀವನಾಂಶ ಕೋರಿರುವುದರಿಂದ ಅದನ್ನು ಪರಿಷ್ಕರಿಸಲು ಅಥವಾ ಹೆಚ್ಚಿಸಲು ಸಿಆರ್ಪಿಸಿ ಸೆಕ್ಷನ್ 127ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹೀಗಾಗಿ ಸಿಆರ್ಪಿಸಿ ಸೆಕ್ಷನ್ 127ರ ಅಡಿ ಜೀವನಾಂಶ ಮೊತ್ತ ಹೆಚ್ಚಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಜಿಲ್ಲಾ ಪ್ರಧಾನ ನ್ಯಾಯಾಲಯ ನೀಡಿರುವ ಆದೇಶ ಸೂಕ್ತವಲ್ಲ ಎಂದು ಪೀಠ ತೀರ್ಪಿನಲ್ಲಿ ಹೇಳಿದೆ.