ಬೆಂಗಳೂರು: ಪತಿಯಿಂದ ವಿವಾಹ ವಿಚ್ಚೇದನ ನೋಟಿಸ್ ಬಂದ ಬಳಿಕ ಪತ್ನಿ ತನ್ನ ಗಂಡ ಮತ್ತವರ ಸಂಬಂಧಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿದರೆ ಆ ಪ್ರಕರಣ ತನ್ನ ಮಹತ್ವ ಕಳೆದುಕೊಳ್ಳುತ್ತದೆ ಎಂದು ಹೈಕೋರ್ಟ್ ಹೇಳಿದೆ. ವಿಚ್ಚೇದನ ನೋಟಿಸ್ ಬಂದ ಬಳಿಕ ಪತಿ ವಿರುದ್ಧ ಪತ್ನಿ ನೀಡಿದ್ದ ದೂರು ಪ್ರಶ್ನಿಸಿ ನಾಗೇಶ್ ಗುಂಡ್ಯಾಲ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಪತಿ ಹಾಗೂ ಆತನ ಸಂಬಂಧಿಗಳ ವಿರುದ್ಧ ಸಾಮಾನ್ಯ ಆರೋಪಗಳನ್ನು ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ವೈಯಕ್ತಿಕವಾಗಿ ಪ್ರತಿಯೊಬ್ಬರೂ ಇಂಥದ್ದೇ ಆರೋಪ ಮಾಡಿದ್ದಾರೆ ಎಂದು ನಿರ್ದಿಷ್ಟವಾಗಿ ಏನೂ ಹೇಳಿಲ್ಲ. ಹಾಗಾಗಿ ಅರ್ಜಿದಾರರು ತಪ್ಪು ಮಾಡಿದ್ದಾರೆ ಎಂದು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ. ಪ್ರಕರಣದಲ್ಲಿ ಪತಿ 2018ರ ಡಿ.17ರಂದು ಸೊಲ್ಲಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪತ್ನಿ, ಪತಿ ಹಾಗೂ ಆತನ ಸಂಬಂಧಿಗಳೆಲ್ಲರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಹಾಗಾಗಿ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಪೀಠ ಹೇಳಿತು.
ಪ್ರಕರಣದ ಹಿನ್ನೆಲೆ ಹೀಗಿದೆ..: ರಾಯಚೂರಿನ ದೇವದುರ್ಗದ ಸುಮಾ ಮತ್ತು ಖಾಸಗಿ ಕಂಪನಿಯ ನೌಕರ ಗೋಪಾಲ್ ಗುಂಡ್ಯಾಲ್ 2013ರ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಆ ನಂತರ ತನಗೆ ಹಿಂದಿ ಅಥವಾ ಮರಾಠಿ ಭಾಷೆ ಬಾರದ ಕಾರಣ ಪತಿ ತನ್ನನ್ನು ಪುಣೆಗೆ ಕರೆದುಕೊಂಡು ಹೋಗದೆ ತನ್ನ ಸಂಬಂಧಿಗಳ ಮನೆಯಲ್ಲೇ ಬಿಟ್ಟು ಹೋಗಿದ್ದರು ಎಂದು ಸುಮಾ ಆರೋಪಿಸಿದ್ದಾರೆ. ಪತಿಯ ಸಂಬಂಧಿಗಳು ಪುಣೆಯಲ್ಲಿರುವ ಪತಿಯ ಮನೆಗೆ ಹೋಗು ಎಂದು ಬಲವಂತ ಮಾಡುತ್ತಿದ್ದಾರೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಪತಿ 2018ರ ಡಿ.17ರಂದು ವಿವಾಹ ವಿಚ್ಚೇದನಕ್ಕೆ ಸೊಲ್ಲಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ದೂರುದಾರ ಪತ್ನಿಗೆ ನೋಟಿಸ್ ಜಾರಿ ಮಾಡಿತ್ತು. ಪತ್ನಿ, ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪತಿ ಹಾಗೂ ಅವರ ಸಂಬಂಧಿಗಳೆಲ್ಲರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಗುಂಡ್ಯಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಪೀಠ ದೂರು ರದ್ದುಪಡಿಸಿದೆ.
ಮಠಾಧೀಶರಿಗೆ ₹5 ಲಕ್ಷ ದಂಡ:ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಪಡೆಯುವುದಕ್ಕೆ ಮುಂದಾಗಿದ್ದ ಸ್ಥಾಪನೆಯಾಗದ ಮಠದ ನಕಲಿ ಮಠಾಧೀಶರೊಬ್ಬರಿಗೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಬಳಿಯ ರಾಮಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಜಗದ್ಗುರು ಶ್ರೀ ನೀಲಕಂಠ ಸಾರಂಗ್ ದೇಸಾಯಿ ಕೇಂದ್ರ ಮಹಾಸ್ವಾಮಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದ್ಗಲ್ ಮತ್ತು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠ ಈ ಭೂಮಿಯ ಮೇಲೆ ಹಕ್ಕು ಸಾಧಿಸಲು ಮಠದ ಅಧಿಪತಿ, ಪೀಠಾಧಿಪತಿ, ಸರ್ವಾಧಿಕಾರಿ ಮತ್ತು ಕಾರ್ಯದರ್ಶಿ ಹೆಸರಿನಲ್ಲಿ 1979ರಿಂದ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದೆ.