ಬೆಂಗಳೂರು: ಊಹಾತ್ಮಕ ಸಾಕ್ಷಿಗಳನ್ನು ಪರಿಗಣಿಸಿ ಯಾವುದೇ ಆರೋಪಿಗೆ ಶಿಕ್ಷೆ ವಿಧಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದ ಇಬ್ಬರು ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿ ಆದೇಶಿಸಿದೆ.
ಅಪ್ರಾಪ್ತೆಯನ್ನು ಅಪಹರಣ ಮಾಡಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ ಆರೋಪದಲ್ಲಿ 7 ವರ್ಷ ಶಿಕ್ಷೆ ಮತ್ತು ತಲಾ 20 ಸಾವಿರ ರೂ. ಗಳ ದಂಡಕ್ಕೆ ಗುರಿಯಾಗಿದ್ದ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪ್ರಕರಣದಲ್ಲಿ ಸಂತ್ರಸ್ತೆ, ಆಕೆಯ ತಂದೆ ಮತ್ತು ತಾಯಿ ತಮ್ಮ ಮಗಳ ಮೇಲೆ ಯಾವುದೇ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಪೋಷಕರು ಸೇರಿದಂತೆ ಎಲ್ಲ ಸಾಕ್ಷಿಗಳು ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ. ಜತೆಗೆ ಐಪಿಸಿ ಸೆಕ್ಷನ್ 366ಎ ಅಡಿಯಲ್ಲಿ ಶಿಕ್ಷೆ ವಿಧಿಸಬೇಕಾದ್ರೆ ಆರೋಪಿ ಆಪ್ರಾಪ್ತೆಯನ್ನು ಪ್ರೇರೇಪಿಸಿರಬೇಕು, ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಅಪ್ರಾಪ್ತೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಿರುವ ಸಂಬಂಧ ಸೂಕ್ತ ಪುರಾವೆಗಳಿರಬೇಕು ಎಂದು ಕೋರ್ಟ್ ತಿಳಿಸಿದೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಸಂಶಯವಿರುವಂತಹ ಸಾಕ್ಷ್ಯಗಳನ್ನು ಪರಿಗಣಿಸಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಅರ್ಜಿದಾರರು 2011ರ ಮಾ.18 ರಂದು ಪ್ರಕರಣದಲ್ಲಿ ದೂರುದಾರರಾಗಿರುವವರ ಮಗಳನ್ನು ವಿವಾಹವಾಗುವುದಕ್ಕಾಗಿ ಇತರೆ ಆರೋಪಿಗಳೊಂದಿಗೆ ಅಪಹರಣ ಮಾಡಿ ಬೆಳಗಾವಿಯ ಮೂಲಕ ಕೊಲ್ಹಾಪುರಕ್ಕೆ ಕರೆದೊಯ್ದಿದ್ದಾರೆ. ಪ್ರಕರಣದ ಮೊದಲ ಆರೋಪಿ ಬಾಲಕಿಯನ್ನು ಸುಮಾರು 20 ದಿನಕ್ಕೂ ಹೆಚ್ಚು ತನ್ನಲ್ಲಿ ಉಳಿಸಿಕೊಂಡು ಬಳಿಕ ಇಚ್ಛೆಗೆ ವಿರುದ್ಧವಾಗಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರು ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ್ದ ಪೊಲೀಸರು ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 344 (10 ದಿನಗಳಿಗೂ ಹೆಚ್ಚು ಕಾಲ ಅಕ್ರಮ ಬಂಧನದಲ್ಲಿಡುವುದು) ಮತ್ತು 366ಎ(ಅಪ್ರಾಪ್ತೆಯನ್ನು ಲೈಂಗಿಕ ಕ್ರಿಯೆಗಾಗಿ ಒದಗಿಸುವುದು) ಅಡಿಯಲ್ಲಿ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ (ಅರ್ಜಿದಾರರಿಗೆ ಮೊದಲ ಮತ್ತು 6ನೇ ಆರೋಪಿ)ಗೆ ಅರ್ಜಿದಾರರಿಗೆ ವಿಚಾರಣಾ ನ್ಯಾಯಾಲಯ ಎರಡು ಆರೋಪಗಳಲ್ಲಿ ಒಟ್ಟು 7 ವರ್ಷ ಜೈಲು ಶಿಕ್ಷೆ ಮತ್ತು ತಲಾ 30 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿತ್ತು. ಅಲ್ಲದೇ ಇತರೆ ಆರೋಪಿಗಳನ್ನು ದೋಷಮುಕ್ತರನ್ನಾಗಿ ಪ್ರಟಕಸಿತ್ತು. ಶಿಕ್ಷೆಗೆ ಗಿರಿಯಾಗಿದ್ದ ಅರ್ಜಿದಾರರು ಪ್ರಕರಣದ ಮೊದಲನೇ ಮತ್ತು 6ನೇ ಆರೋಪಿಗಳು ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ಎಲ್ಲ ಸಾಕ್ಷಿಗಳು ಪಾಸಿಕೂಷನ್‌ಗೆ ವಿರುದ್ಧವಾಗಿವೆ. ಆದರೂ ಪೊಲೀಸ್‌ರ ಸಾಕ್ಷ್ಯಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದೆ. ಅಲ್ಲದೇ ತನಿಖಾಧಿಕಾರಿಗಳು ಸಂತ್ರಸ್ತೆಯ ವಯಸ್ಸನ್ನು ಪತ್ತೆ ಹಚ್ಚುವುದಕ್ಕಾಗಿ ಈವರೆಗೂ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಜತೆಗೆ, ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿರುವ ಸಂಬಂಧ ಯಾವುದೇ ವೈದ್ಯಕೀಯ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯ ಆದೇಶವನ್ನು ರದ್ದು ಪಡಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ:29 ಲಕ್ಷ ರೂ.ಗಳ ದುರುಪಯೋಗ, 28 ವರ್ಷ ಕಳೆದರೂ ಕ್ರಮಕ್ಕೆ ಮುಂದಾಗದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ