ಕರ್ನಾಟಕ

karnataka

ETV Bharat / state

ಕನಿಷ್ಠ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ - Law and Parliamentary Affairs Minister JC Madhuswamy

ನಮ್ಮ ರಾಜ್ಯದಲ್ಲಿ ಮೆಕ್ಕೆಜೋಳವನ್ನು ಪಶುಗಳ ಆಹಾರಕ್ಕೆ ಹೊರತುಪಡಿಸಿ ಮಾನವ ಬಳಕೆಗೆ ಉಪಯೋಗಿಸುವುದಿಲ್ಲ. ಆದ್ದರಿಂದ ಮೆಕ್ಕೆಜೋಳವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

madhuswamy
ಸಚಿವ ಮಾಧುಸ್ವಾಮಿ

By

Published : Dec 8, 2020, 9:08 PM IST

ಬೆಂಗಳೂರು: ರಾಜ್ಯದಲ್ಲಿ ಬೆಳೆದಿರುವ 41 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಉತ್ತರ ನೀಡಿದ್ದು, ಇದನ್ನು ಪ್ರತಿಯಾಗಿ ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ವಿಧಾನಸಭೆಯಲ್ಲಿ ನಿಯಮ 68ರಡಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಕುರಿತು ನಡೆದ ಚರ್ಚೆ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ಮೆಕ್ಕೆಜೋಳವನ್ನು ಎಂಎಸ್​ಪಿಯಡಿ ಖರೀದಿಸಲು ಸಾಧ್ಯವಿಲ್ಲ. ಮೆಕ್ಕೆಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಸಾಧ್ಯವಿಲ್ಲ. ಆದರೆ ನೀವೇ ಮೆಕ್ಕೆಜೋಳವನ್ನು ಖರೀದಿಸಿ ಹಂಚಿಕೆ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ನಮ್ಮ ರಾಜ್ಯದಲ್ಲಿ ಮೆಕ್ಕೆಜೋಳವನ್ನು ಪಶುಗಳ ಆಹಾರಕ್ಕೆ ಹೊರತುಪಡಿಸಿ ಮಾನವ ಬಳಕೆಗೆ ಉಪಯೋಗಿಸುವುದಿಲ್ಲ. ಆದ್ದರಿಂದ ಮೆಕ್ಕೆಜೋಳವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಹೆಚ್.ಕೆ.ಪಾಟೀಲ್, ಮೆಕ್ಕೆಜೋಳವನ್ನು ಮಾನವ ಬಳಕೆಗೆ ಉಪಯೋಗಿಸುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಮೆಕ್ಕೆಜೋಳದಿಂದ ಗ್ಲೂಕೋಸ್ ಸಿದ್ಧಪಡಿಸುತ್ತಾರೆ. ಕೈಗಾರಿಕೆಗಳ ಉದ್ದೇಶಕ್ಕೂ ಇದರ ಬಳಕೆಯಾಗುತ್ತದೆ. ಸರ್ಕಾರ ಈ ರೀತಿ ಅಸಹಾಯಕವಾದ ಉತ್ತರ ನೀಡಿದರೆ ರೈತರ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರೈತರು ನಷ್ಟಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಸ್ವಾಮಿನಾಥನ್ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸುಗಳನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಆ ವರದಿಯನ್ನು ಒಪ್ಪಿಕೊಂಡಿರುವುದಾಗಿ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ ಈಗ ರೈತರನ್ನು ಸಂಕಷ್ಟಕ್ಕೆ ಸಿಲುಕಲು ಬಿಡುವುದು ಸರಿಯಲ್ಲ ಎಂದರು.

ಓದಿ:ವಿಧಾನಸಭೆಯಲ್ಲಿ 3,320.40 ಕೋಟಿ ರೂ. ಮೊತ್ತದ ಪೂರಕ ಅಂದಾಜು ಮಂಡನೆ

ಕೊರೊನಾ, ಜಿಎಸ್‌ಟಿ ಪರಿಹಾರ, ತೆರಿಗೆ ಸಂಗ್ರಹದಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇದು ಒಂದು ವರ್ಷಕ್ಕೆ ಸೀಮಿತವಾದ ಸಮಸ್ಯೆ. ಹಾಗಂತ ಈಗ ರೈತರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ಮೆಕ್ಕೆಜೋಳವನ್ನು ಖರೀದಿ ಮಾಡಲು ಸಾಧ್ಯವೇ ಇಲ್ಲ ಎಂದು ಸರ್ಕಾರ ಹೇಳಿದರೆ ರೈತರು ಎಲ್ಲಿಗೆ ಹೋಗಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಫಿ ಹಾಗೂ ಮೆಣಸು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ನೀಡಿರುವ ಹೇಳಿಕೆ ಪ್ರಕಾರ, ಹೊರ ದೇಶದಿಂದ ನಮ್ಮ ದೇಶಕ್ಕೆ 2016-17ರಲ್ಲಿ 25 ಸಾವಿರ ಟನ್, 2017-18ರಲ್ಲಿ 29,650 ಟನ್, 2018-19ರಲ್ಲಿ 24,950 ಟನ್ ಮೆಣಸು ಆಮದು ಮಾಡಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಬಳಕೆಗೆ ಬೇಕಿರುವ ಮೆಣಸಿನ ಪ್ರಮಾಣ 55 ಸಾವಿರ ಟನ್. ಆದರೆ ನಾವು ಬೆಳೆಯುತ್ತಿರುವುದು 71 ಸಾವಿರ ಟನ್. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾವು ಮೆಣಸು ಬೆಳೆಯುತ್ತಿರುವಾಗ ಹೊರ ದೇಶದಿಂದ ಆಮದು ಮಾಡಿಕೊಳ್ಳುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಮೆಣಸು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಚೀನಾ ರೇಷ್ಮೆ ಆಮದು ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದರಿಂದ ಪರಿಸ್ಥಿತಿ ಏನಾಗಿದೆ ಅನ್ನೋದು ನಮ್ಮ ಮುಂದಿದೆ. ಸರ್ಕಾರ ಅಸಾಯಕತೆ ವ್ಯಕ್ತಪಡಿಸುವುದು ಬೇಡ. ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಿದ್ದೀರಾ? ಹೆಚ್ಚುವರಿ 30 ಸಾವಿರ ಕೋಟಿ ರೂ. ಸಾಲ ಪಡೆಯುತ್ತಿದ್ದಾರೆ. ಇನ್ನೂ 5 ಸಾವಿರ ಕೋಟಿ ರೂ. ಪಡೆದು ರೈತರ ನೆರವಿಗೆ ಧಾವಿಸಿ ಎಂದು ಆಗ್ರಹಿಸಿದರು. ಬಳಿಕ ಸರ್ಕಾರದ ಉತ್ತರಕ್ಕೆ ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

For All Latest Updates

ABOUT THE AUTHOR

...view details