ಬೆಂಗಳೂರು: ರಾಜ್ಯದ ಕಾರಾಗೃಹಗಳಿಗೆ ಗಾಂಜಾ ಮತ್ತಿತರೆ ಮಾದಕವಸ್ತುಗಳು ಸರಬರಾಜಾಗುತ್ತಿರುವ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಕುರಿತಂತೆ ನಗರದ ವಕೀಲ ಧರ್ಮಪಾಲ್ ಹಾಗೂ ಕೆ. ನಾರಾಯಣಶೆಟ್ಟಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ವಕೀಲ ಧರ್ಮಪಾಲ್ ವಾದ ಮಂಡಿಸಿ, ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಖುದ್ದು ಜೈಲು ಸಿಬ್ಬಂದಿಯೇ ಮಾದಕವಸ್ತು ಪೂರೈಕೆ ಮಾಡುತ್ತಿರುವ ಆರೋಪವಿದೆ. ಜೈಲುಗಳ ಒಳಗೆ ಸಿಸಿಟಿವಿ ಇಲ್ಲ. ಸೂಕ್ತ ಮೇಲ್ವಿಚಾರಣೆಯೂ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು ಮಾಧ್ಯಮ ವರದಿ ಆಧರಿಸಿ ಪಿಐಎಲ್ ಸಲ್ಲಿಸಲಾಗಿದೆ. ಜೈಲುಗಳ ಒಳಗೆ ಸಿಸಿಟಿವಿಗಳಿವೆ ಎಂದು ಹೇಳಿದರು.
ಪೀಠದ ಆದೇಶ:ಸರ್ಕಾರದ ಪರ ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಪೀಠ, ಜೈಲುಗಳ ಒಳಗಿನ ವಸ್ತು ಸ್ಥಿತಿ ಏನು, ಸಿಸಿಟಿವಿ ವ್ಯವಸ್ಥೆ ಹೇಗಿದೆ ಎಂಬುದು ನಮಗೂ ಗೊತ್ತಿದೆ ಎಂದು ಟೀಕಿಸಿತು. ಬಳಿಕ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಗೃಹ ಸಚಿವರು, ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಬಂಧೀಖಾನೆ ಡಿಜಿಪಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.