ದೊಡ್ಡಬಳ್ಳಾಪುರ: ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರದ ವಿಚಾರವಾಗಿ 35 ಲಕ್ಷಕ್ಕೆ ನಗರಸಭೆ ಸದಸ್ಯ ಸ್ಥಾನ ಹರಾಜಿಗೆ ಇಡಲಾಗಿತ್ತು. ಈ ಕುರಿತು ಈಟಿವಿ ಭಾರತ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಚುನಾವಣಾ ಕಣದಲ್ಲಿ ಇಬ್ಬರು ಅಭ್ಯರ್ಥಿಗಳಿದ್ದು, ಸೆ.3 ರಂದು ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ನಗರದ ಮುತ್ಸಂದ್ರ ವಾರ್ಡ್ -3 ರ ಸದಸ್ಯ ಸ್ಥಾನಕ್ಕಾಗಿ ಕಾಂಗ್ರೆಸ್ನಿಂದ ದೀಪಾ ಕೃಷ್ಣಮೂರ್ತಿ, ಬಿಜೆಪಿಯಿಂದ ಸುಮಿತ್ರಾ ಆನಂದ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಶೋಭಾ ಶಶಿಧರ್ ಚುನಾವಣಾ ಕಣದಲ್ಲಿದ್ದರು. ನಿನ್ನೆ ರಾತ್ರಿ ಸಭೆ ಸೇರಿದ ವಾರ್ಡ್ನ ಕೆಲವು ಮುಖಂಡರು ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸದಸ್ಯ ಸ್ಥಾನ ಹರಾಜು ಇಟ್ಟಿದ್ದರು.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅತಿ ಹೆಚ್ಚು ಹಣ ಕೊಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬರಲಾಗಿತ್ತು. 35 ಲಕ್ಷ ಕೊಟ್ಟು ಸದಸ್ಯ ಸ್ಥಾನ ಖರೀದಿ ಮಾಡಲು ಕಣದಲ್ಲಿರುವ ಅಭ್ಯರ್ಥಿ ಮುಂದೆ ಬಂದಿದ್ದರು. ಇನ್ನುಳಿದ ಇಬ್ಬರು ನಾಮಪತ್ರ ವಾಪಸ್ ಪಡೆಯುವ ತೀರ್ಮಾನಕ್ಕೆ ಬಂದಿದ್ದರು.