ಕರ್ನಾಟಕ

karnataka

ETV Bharat / state

170 ಕ್ಷೇತ್ರದ ಅಭ್ಯರ್ಥಿಗಳ ಕುರಿತು ಚರ್ಚೆ ಮಾಡಲಾಗಿದ್ದು, 50 ಕ್ಷೇತ್ರಗಳಷ್ಟೇ ಬಾಕಿ ಇದೆ: ಡಿಕೆಶಿ

ಕಾಂಗ್ರೆಸ್​​ ಪಕ್ಷದ ಸ್ಕ್ರೀನಿಂಗ್ ಕಮಿಟಿಯ ಸಭೆಯಲ್ಲಿ 170 ಕ್ಷೇತ್ರಗಳ ಅಭ್ಯರ್ಥಿಗಳ ಚರ್ಚೆ ಮಾಡಿಲಾಗಿದ್ದು, ಕೇಂದ್ರ ನಾಯಕರಿಗೆ ಅಭ್ಯರ್ಥಿ ಪಟ್ಟಿ ಕಳುಹಿಸಿಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.

candidates-for-170-constituencies-discussed-50-constituencies-pending-dk-shivakumar
170 ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ಮಾಡಲಾಗಿದ್ದು, 50 ಕ್ಷೇತ್ರ ಬಾಕಿ ಇದೆ: ಡಿಕೆಶಿ

By

Published : Mar 9, 2023, 8:32 PM IST

170 ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ಮಾಡಲಾಗಿದ್ದು, 50 ಕ್ಷೇತ್ರ ಬಾಕಿ ಇದೆ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್​​ ಪಕ್ಷದ ಸ್ಕ್ರೀನಿಂಗ್ ಕಮಿಟಿ ಕಳೆದ ಮೂರು ದಿನಗಳಿಂದ ಸಭೆ ನಡೆಸುತ್ತಿದ್ದು, ಸುಮಾರು 170 ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ಮಾಡಲಾಗಿದೆ, ಇನ್ನು 50 ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಬಾಕಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಚರ್ಚೆಯಾಗಿರುವ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿಕೊಟ್ಟಿದ್ದೇವೆ. ಎಲ್ಲ ಕಡೆಗಳಲ್ಲಿ ಒಮ್ಮತದ ತೀರ್ಮಾನವನ್ನು ತೆಗೆದುಕೊಂಡಿದ್ದು, ಎಲ್ಲ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದೆ ಎಂದರು.

ಪಕ್ಷದಲ್ಲಿ ನಾಯಕರ ಸಂಧಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇನ್ನು ಕೆಲವು ಕ್ಷೇತ್ರಗಳಲ್ಲಿ ನಾಯಕರುಗಳನ್ನು ಕರೆಸಿ ಚರ್ಚೆ ಮಾಡಬೇಕಿದೆ. ನಾಳೆಯಿಂದ ಎಲ್ಲೆಲ್ಲಿ ಭಿನ್ನಾಭಿಪ್ರಾಯಗಳಿವೆಯೋ ಆ ಕ್ಷೇತ್ರದ ನಾಯಕರನ್ನು ಕರೆಸಿ ಮಾತನಾಡುತ್ತೇವೆ. ಇಂದು ಚಿಕ್ಕಮಗಳೂರು ಜಿಲ್ಲೆ ನಾಯಕರ ಜತೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ಬಿಜೆಪಿ ಸರ್ಕಾರ ಸೋಲಿಸಲೇಬೇಕು ಎಂದು ಅನೇಕರಲ್ಲಿ ಆಸೆ ಇದೆ. ಹೀಗಾಗಿ ಎಲ್ಲರ ಜತೆ ಚರ್ಚೆ ಮಾಡಿ ಒಮ್ಮತದ ತೀರ್ಮಾನ ಮಾಡುತ್ತೇವೆ’ ಎಂದರು.

ಪಕ್ಷ ಗೆಲ್ಲುವುದು ಮುಖ್ಯ, ವ್ಯಕ್ತಿಯಲ್ಲ: ರಾಜಾಜಿನಗರ ಹಾಗೂ ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಮಾತನಾಡಿ, ‘ಈ ಬಗ್ಗೆ ಯಾವ ತೀರ್ಮಾನ ಮಾಡಲಾಗಿದೆ ಎಂದು ಈಗ ಹೇಳುವುದಿಲ್ಲ. ರಾಜ್ಯದಲ್ಲಿ ಪಕ್ಷ ಗೆಲ್ಲುವುದು ಮುಖ್ಯವೇ ಹೊರತು ವ್ಯಕ್ತಿಗಳಲ್ಲ. ಸಾಮಾಜಿಕ ನ್ಯಾಯ ಹಾಗೂ ಪಕ್ಷದ ಗೆಲುವು, ಪಕ್ಷದ ಕುರಿತು ಬದ್ಧತೆ ಗಮನದಲ್ಲಿಟ್ಟುಕೊಂಡು ನಾವು ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.

ಬೆಂ-ಮೈ ಹೆದ್ದಾರಿ ಶಂಕುಸ್ಥಾಪನೆ ಮಾಡಿದ್ದು ಆಸ್ಕರ್​ ಪರ್ನಾಂಡಿಸ್​: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಸರ್ಕಾರ ಮೊದಲು ಸರ್ವೀಸ್ ರಸ್ತೆ ಮಾಡಿಕೊಡಲಿ, ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ ಎನ್ನುತ್ತಾರೆ, ಈ ರಸ್ತೆಯಲ್ಲಿ ಸಾಗುವಾಗ ಗಾಡಿಗಳು ತೊಂದರೆ ಅನುಭವಿಸುತ್ತಿವೆ. ಕಳೆದ ಆರು ತಿಂಗಳಲ್ಲಿ ಎಷ್ಟು ಅಪಘಾತಗಳಾಗಿವೆ. ಹೀಗಾಗಿ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಲಿ. ಈ ಯೋಜನೆ ಬಿಜೆಪಿ ಅವರ ಕಾಲದಲ್ಲಿ ಆರಂಭವಾಗಿದೆ. ಆದರೆ, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಿ ಅದಕ್ಕೆ ಅನುಮತಿ ನೀಡಿ ಶಂಕುಸ್ಥಾಪನೆ ಮಾಡಿದ್ದು ಆಸ್ಕರ್ ಫರ್ನಾಂಡೀಸ್ ಅವರು ಕೇಂದ್ರ ಸಚಿವರಾಗಿದ್ದಾಗ’ ಎಂದು ಡಿ ಕೆ ಶಿವಕುಮಾರ್​ ತಿಳಿಸಿದರು.

ತನಿಖಾ ಸಂಸ್ಥೆಗಳ ದುರ್ಬಳಕೆ ಸರಿಯಲ್ಲ:ತನಿಖಾ ಸಂಸ್ಥೆಗಳ ದುರ್ಬಳಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೇವಲ ವಿರೋಧ ಪಕ್ಷಗಳ ನಾಯಕರನ್ನು ಮಾತ್ರ ತನಿಖಾ ಸಂಸ್ಥೆಗಳು ವಿಚಾರಣೆ ಹೆಸರಲ್ಲಿ ಕಿರುಕುಳ ನೀಡುತ್ತಿವೆ. ತನಿಖಾ ಸಂಸ್ಥೆಗಳ ದುರ್ಬಳಕೆ ಸರಿಯಲ್ಲ. ತನಿಖಾ ಸಂಸ್ಥೆಗಳು ತನ್ನದೇ ಆದ ಅಧಿಕಾರ ಇದ್ದು, ಅವರು ಸ್ವಾಯತ್ತ ರೀತಿಯಲ್ಲಿ ಕೆಲಸ ಮಾಡಬೇಕು. ಯಾರೆಲ್ಲಾ ಅಕ್ರಮ ಮಾಡಿದ್ದಾರೋ ಅವರ ಮೇಲೆ ತನಿಖೆ ಮಾಡಲಿ. ಆದರೆ, ಕೇವಲ ವಿರೋಧ ಪಕ್ಷದ ನಾಯಕರನ್ನು ಮಾತ್ರ ಗುರಿ ಮಾಡುತ್ತಿರುವುದು ಸರಿಯಲ್ಲ’ ಎಂದರು.

ಇದನ್ನೂ ಓದಿ:ಸಂಸದೆ ಸುಮಲತಾ ಬಿಜೆಪಿ ಸೇರುವ ಮಾತುಕತೆ ನಡೆದಿದೆ: ಸಿಎಂ ಬೊಮ್ಮಾಯಿ

ABOUT THE AUTHOR

...view details