ಬೆಂಗಳೂರು : ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ, ತಮ್ಮ ಕುಟುಂಬ ಮತ್ತು ಅವಲಂಬಿತರ ಆಸ್ತಿ ವಿವರಗಳನ್ನು ಮರೆಮಾಚಿದರೆ ಅದೂ ಕೂಡ ಭ್ರಷ್ಟಾಚಾರ ಸಮವಾಗಲಿದ್ದು, ಅನರ್ಹತೆಗೂ ಕಾರಣವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಗ್ರಾಮ ಪಂಚಾಯ್ತಿ ಸದಸ್ಯರು ಅನರ್ಹತೆಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಕಲಬುರಗಿ ಪೀಠದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಲ್ಲದೆ, ಅರ್ಜಿದಾರರು ಆಸ್ತಿ ವಿವರ ಸಲ್ಲಿಸದೇ ಇರುವುದು ಅವರಿಗೆ ಚುನಾವಣೆಯಲ್ಲಿ ಪೂರಕ ಪರಿಣಾಮ ಬೀರಿದೆಯೇ ಎಂಬುದನ್ನು ಹೇಳಲಾಗದು. ಆದರೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993ರ ಅನ್ವಯ ಅಭ್ಯರ್ಥಿ ಆಸ್ತಿ ವಿವರ ಸಲ್ಲಿಸದೇ ಇರುವುದು ಸೆಕ್ಷನ್ 9(1)(ಬಿ) ಪ್ರಕಾರ ಅನರ್ಹತೆಗೆ ದಾರಿ ಮಾಡಿಕೊಡಲಿದೆ ಎಂಬುದಾಗಿ ಪೀಠ ತಿಳಿಸಿದೆ.
ಇದನ್ನೂ ಓದಿ:ಟ್ವಿಟ್ಟರ್ಗೆ ದಂಡ ವಿಧಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ತಡೆ
ಪ್ರಸ್ತುತದ ಪ್ರಕರಣದಲ್ಲಿ ಮೂಲ ಅರ್ಜಿದಾರರು ಗೆದ್ದ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸುವುದು ಮಾತ್ರವಲ್ಲದೆ, ತಮ್ಮನ್ನು ವಿಜಯಿ ಎಂದು ಘೋಷಿಸುವಂತೆ ಕೋರಿದ್ದಾರೆ. ಹಾಗಾಗಿ ಎಲ್ಲ ಸ್ಪರ್ಧಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಬೇಕಿತ್ತು. ಅವರ ಉಪಸ್ಥಿತಿಯಲ್ಲಿಯೇ ಯಾರು ವಿಜಯಿ ಎಂದು ಘೋಷಿಸಬೇಕಾಗುತ್ತಿದೆ. ಇಬ್ಬರೇ ಅಭ್ಯರ್ಥಿಗಳಿದ್ದಾಗ ಒಬ್ಬ ಅಭ್ಯರ್ಥಿ ಅನರ್ಹ ಎಂದು ಘೋಷಿಸಿದರೆ, ಸಹಜವಾಗಿಯೇ ಮತ್ತೊಬ್ಬರು ಅರ್ಹರು ಅಥವಾ ವಿಜಯಿಯಾಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ಇತರೆ ಸ್ಪರ್ಧಿಗಳಿದ್ದ ಕಾರಣ, ಯಾರು ವಿಜಯಿ ಎಂದು ನಿರ್ಣಯಿಸುವುದು ಕಷ್ಟಕರ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.