ಬೆಂಗಳೂರು :ಹಾನಗಲ್ನಿಂದ ಉದಾಸಿ ಕುಟುಂಬ ಸೇರಿ ಎರಡು ಹೆಸರು, ಸಿಂದಗಿಯಿಂದ ರಮೇಶ್ ಬೂಸನೂರು ಸೇರಿ ಮೂರು ಹೆಸರುಗಳನ್ನು ಕೇಂದ್ರ ಸಮಿತಿಗೆ ಕಳುಹಿಸಿ ಕೊಡಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು.
ಹಾನಗಲ್ನಲ್ಲಿ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡಬೇಕಾ ಅಥವಾ ಬೇರೆಯವರಿಗೆ ನೀಡಬೇಕಾ ಎನ್ನುವ ಕುರಿತು ಚರ್ಚೆ ನಡೆಸಲಾಯಿತು. ಸಿಎಂ ಉದಾಸಿ ಅವರ ಸೊಸೆ ರೇವತಿ ಉದಾಸಿ, ಕಲ್ಯಾಣ ಕುಮಾರ್ ಶೆಟ್ಟರ್, ಸಿದ್ದರಾಜ ಕಲಕೋಟೆ, ಶಿವರಾಜ ಸಜ್ಜನ್, ಮಹಾಂತೇಶ ಸೊಪ್ಪಿನ ಹೆಸರುಗಳಲ್ಲಿ ರೇವತಿ ಉದಾಸಿ ಜೊತೆ ಮತ್ತೊಂದು ಹೆಸರನ್ನು ಕೇಂದ್ರಕ್ಕೆ ಕಳುಹಿಸಿ ಕೊಡಲು ನಿರ್ಧರಿಸಲಾಯಿತು ಎನ್ನಲಾಗಿದೆ.
ಇನ್ನು, ಸಿಂದಗಿ ಕ್ಷೇತ್ರದಲ್ಲಿ ಮಾಜಿ ಶಾಸಕ ರಮೇಶ್ ಬೂಸನೂರು, ಸಂಗನಗೌಡ ಪಾಟೀಲ್ ಹಾಗೂ ಸಿದ್ದು ಬಿರಾದಾರ ಹೆಸರುಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಮೂವರ ಹೆಸರುಗಳನ್ನೂ ಕೇಂದ್ರ ಸಮಿತಿಗೆ ಕಳುಹಿಸಿಕೊಡಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು ಎನ್ನಲಾಗಿದೆ.
ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಸಚಿವರಾದ ಬಿ.ಶ್ರೀರಾಮುಲು, ಆರ್.ಅಶೋಕ್, ಡಾ.ಅಶ್ವತ್ಥ್ ನಾರಾಯಣ, ಜಗದೀಶ್ ಶೆಟ್ಟರ್, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ ಪಾಲ್ಗೊಂಡಿದ್ದರು.
ಓದಿ:ಪಂಜಾಬ್ ಪರಿಸ್ಥಿತಿ: ರಾಜ್ಯ ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟಕ್ಕೆ ಎಚ್ಚರಿಕೆ ಗಂಟೆ