ಕರ್ನಾಟಕ

karnataka

ETV Bharat / state

ಬ್ಲ್ಯಾಕ್ ಫಂಗಸ್​ನಿಂದ ಕ್ಯಾನ್ಸರ್ ರೋಗಿಗಳು ಮುಂಜಾಗ್ರತೆ ವಹಿಸಬೇಕು - ಕ್ಯಾನ್ಸರ್ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್​

ಚಿಕಿತ್ಸೆ ಪಡೆಯದ ಡಯಾಬಿಟಿಸ್ ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಔಷಧಗಳನ್ನು ತೆಗೆದುಕೊಳ್ಳುತ್ತಿರುವ ಜನರಲ್ಲಿ ಈ ರೋಗ ಕಂಡು ಬರುತ್ತದೆ. ಮ್ಯುಕೋರ್ಮೈಸಿಟಿಸ್ ಎಂಬ ಫಂಗಸ್‍ನಿಂದ ಈ ಸೋಂಕು ಹರಡುತ್ತದೆ. ಇದು ನಮ್ಮ ಸುತ್ತಮುತ್ತ ಜೀವಿಸುತ್ತಿರುತ್ತದೆ. ಉಸಿರಾಟದ ಮೂಲಕ, ಬೀಜಕಗಳ ಇನ್ಯಾಕ್ಯುಲೇಶನ್ ಅಥವಾ ಸೇವನೆಯಿಂದ ಈ ಸೋಂಕು ಹರಡುತ್ತದೆ. ಗೋಡೆಗಳಲ್ಲಿ, ನಕಾರಾತ್ಮಕ ಒತ್ತಡ ಇರುವ ಕೊಠಡಿಗಳು, ನೀರು ಸೋರುವಿಕೆ ತಾಣಗಳು, ಕಡಿಮೆ ಅಥವಾ ಕಳಪೆ ಏರ್ ಫಿಲ್ಟ್ರೇಶನ್, ಕಟ್ಟಡ ನಿರ್ಮಾಣ ಚಟುವಟಿಕೆಗಳು ಸೇರಿದಂತೆ ಇತ್ಯಾದಿಗಳಿಂದ ಬ್ಲ್ಯಾಕ್ ಫಂಗಸ್ ಹರಡುತ್ತದೆ .

meeting
meeting

By

Published : Jun 16, 2021, 3:31 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆ ಆಗ್ತಿದ್ದರೆ ಇತ್ತ ಬ್ಲ್ಯಾಕ್ ಫಂಗಸ್ ಸೋಂಕು ಏರಿಕೆ ಆಗ್ತಿದೆ. ಕೋವಿಡ್ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯು ಶೇ.40 ಕ್ಕಿಂತ ಹೆಚ್ಚಿನ ಪ್ರಸರಣ ದರ ಹೊಂದಿದೆ.‌ ಅಂದರೆ ಇದು ವೈರಸ್‍ನ ಮೂಲ ಒತ್ತಡಕ್ಕಿಂತ ಶೇ.50 ಕ್ಕಿಂತ ಹೆಚ್ಚಿನ ಹರಡುವಿಕೆ ಹೊಂದಿದೆ. ಇದು ತೀವ್ರ ರೀತಿಯಾದ ಕಾಯಿಲೆಗೆ ಕಾರಣವಾಗುತ್ತಿದೆ. ಇದರ ಪರಿಣಾಮ ಯುವ ಜನರಲ್ಲಿಯೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

ಈ ಡೆಲ್ಟಾ ರೂಪಾಂತರವು ತೀವ್ರವಾದ ರೋಗ ನಿರೋಧಕ ನಿಗ್ರಹ ಹಾಗೂ ತೀವ್ರ ರೀತಿಯ ಹೈಪರ್ಗ್ಲೈಸೆಮಿಕ್ ಸ್ಥಿತಿ ಉಂಟುಮಾಡುತ್ತದೆ. ಇದು ಮ್ಯುಕೋರ್ಮೈಕೋಸಿಸ್ ಅಂದರೆ ಕಪ್ಪು ಶಿಲೀಂಧ್ರದಂತಹ ಅವಕಾಶವಾದಿ ಸೋಂಕಿನ ಅಪಾಯಕ್ಕೆ ತಳ್ಳುತ್ತದೆ ಎಂದು ವಿಕ್ರಂ ಆಸ್ಪತ್ರೆಯ(ಮಣಿಪಾಲ್ ಹಾಸ್ಪಿಟಲ್ಸ್‍ನ ಸಮೂಹ ಸಂಸ್ಥೆ) ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಇಂದು ಬ್ಲ್ಯಾಕ್ ಫಂಗಸ್ ಹರಡುತ್ತಿರುವ ರೀತಿ ಅದರಿಂದ ಮತ್ತೊಂದಿಷ್ಟು ಅಂಗಾಂಗಗಳಿಗೆ ಆಗುತ್ತಿರುವ ಸಮಸ್ಯೆ ಕುರಿತು ವರ್ಚುಯಲ್ ಸಭೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ವಿಕ್ರಂ ಆಸ್ಪತ್ರೆಯ ಇಎನ್‍ಟಿ ಸರ್ಜನ್ ಡಾ.ಶ್ರೀನಿವಾಸ್, ಮ್ಯುಕೋರ್ಮೈಕೋಸಿಸ್ ಒಂದು ಅಪರೂಪದ ಮತ್ತು ವೇಗವಾಗಿ ಹರಡುವ ರೋಗವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಾವಿನ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಅಂದರು.

ಚಿಕಿತ್ಸೆ ಪಡೆಯದ ಡಯಾಬಿಟಿಸ್ ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು ಔಷಧಗಳನ್ನು ತೆಗೆದುಕೊಳ್ಳುತ್ತಿರುವ ಜನರಲ್ಲಿ ಈ ರೋಗ ಕಂಡು ಬರುತ್ತದೆ. ಮ್ಯುಕೋರ್ಮೈಸಿಟಿಸ್ ಎಂಬ ಫಂಗಸ್‍ನಿಂದ ಈ ಸೋಂಕು ಹರಡುತ್ತದೆ. ಇದು ನಮ್ಮ ಸುತ್ತಮುತ್ತ ಜೀವಿಸುತ್ತಿರುತ್ತದೆ.

ಉಸಿರಾಟದ ಮೂಲಕ, ಬೀಜಕಗಳ ಇನ್ಯಾಕ್ಯುಲೇಶನ್ ಅಥವಾ ಸೇವನೆಯಿಂದ ಈ ಸೋಂಕು ಹರಡುತ್ತದೆ. ಗೋಡೆಗಳಲ್ಲಿ, ನಕಾರಾತ್ಮಕ ಒತ್ತಡ ಇರುವ ಕೊಠಡಿಗಳು, ನೀರು ಸೋರುವಿಕೆ ತಾಣಗಳು, ಕಡಿಮೆ ಅಥವಾ ಕಳಪೆ ಏರ್ ಫಿಲ್ಟ್ರೇಶನ್, ಕಟ್ಟಡ ನಿರ್ಮಾಣ ಚಟುವಟಿಕೆಗಳು ಸೇರಿದಂತೆ ಇತ್ಯಾದಿಗಳಿಂದ ಈ ಫಂಗಸ್ ಹರಡುತ್ತದೆ ಎಂದು ತಿಳಿಸಿದರು..

ಬ್ಲ್ಯಾಕ್ ಫಂಗಸ್ ಔಷಧ ಕೊರತೆ ಹಿಂದಿನಂತೆ ಇಲ್ಲ:

ಇಂಟರ್ನಲ್ ಮೆಡಿಸಿನ್ ಡಾ.ಪ್ರಮೋದ್ ವಿ.ಸತ್ಯ ಮಾತನಾಡಿ, ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಈ ಕಪ್ಪು ಶಿಲೀಂಧ್ರ ರೋಗ ತಡೆಗಟ್ಟಬಹುದಾಗಿದೆ. ಅಂದರೆ, ರೋಗ ಲಕ್ಷಣಗಳು ಕಂಡು ಬಂದ ಆರಂಭಿಕ ಹಂತದಿಂದ ಮೂರು ವಾರಗಳ ಚಿಕಿತ್ಸೆಯನ್ನು ಪಡೆದುಕೊಂಡರೆ ಗುಣಪಡಿಸಬಹುದಾಗಿದೆ. ಈ ಗುಣಲಕ್ಷಣ ಹೊಂದಿದ ರೋಗಿಗಳು ಸಂಪೂರ್ಣವಾಗಿ ಮತ್ತು ಆಗಿಂದಾಗ್ಗೆ ತೊಂದರೆಗೊಳಗಾದ ಜಾಗದಲ್ಲಿರುವ ಸೋಂಕಿತ ಅಂಗಾಂಶವನ್ನು ತೆಗೆದುಹಾಕಲು ಸರ್ಜರಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಅದೇ ರೀತಿ, ಬ್ಲ್ಯಾಕ್ ಫಂಗಸ್ ಔಷಧ ಕೊರತೆ ಹಿಂದಿನಂತೆ ಇಲ್ಲ. ಡ್ರಗ್ ಕಂಟ್ರೋಲ್ ಬೋರ್ಡ್​ನಿಂದ‌ ಸರಿಯಾದ ಸಮಯಕ್ಕೆ ಔಷಧ ಸರಬರಾಜು ಆಗುತ್ತಿದ್ದು, ಆಂಫೋಟೆರಿಸಿನ್-ಬಿ ಮಾದರಿಯಂತ ಫಂಗಸ್ ನಿರೋಧಕ ಔಷಧ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು ಅಂದರು. ರೋಗದ ಗುಣಲಕ್ಷಣಗಳು ಕಂಡು ಬಂದ ಆರಂಭಿಕ ಹಂತದಲ್ಲಿಯೇ ತಕ್ಷಣ ಇಎನ್‍ಟಿ ತಜ್ಞ ವೈದ್ಯರನ್ನು ಸಂಪರ್ಕ ಮಾಡಿ ಅವರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಅಂದರು..‌

ರೋಗನಿರೋಧಕ ಶಕ್ತಿ ಕಡಿಮೆ ಇರೋರಿಗೂ ಅಪಾಯ:

ವಿಕ್ರಂ ಆಸ್ಪತ್ರೆಯ ನೆಫ್ರೋಲಾಜಿಸ್ಟ್ & ಟ್ರಾನ್ಸ್‍ಪ್ಲಾಂಟ್ ಫಿಸಿಶಿಯನ್ ಡಾ.ಪಾರ್ಥ ಪ್ರದೀಪ್ ಶೆಟ್ಟಿ ಮಾತನಾಡಿ,ರೋಗನಿರೋಧಕ ಶಕ್ತಿಯನ್ನು ನಿಗ್ರಹಿಸಲು ಕಾರಣವಾಗುವ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳು ಕಪ್ಪು ಶಿಲೀಂಧ್ರ ಸೋಂಕಿನ ಅಪಾಯವನ್ನು ಹೊಂದಿರುತ್ತಾರೆ. ಅನಿಯಂತ್ರಿತವಾದ ಮಧುಮೇಹವು ಅಪಾಯಕಾರಿ ಅಂಶಗಳಲ್ಲಿ ಒಂದಾಗಿರುತ್ತದೆ. ಕ್ಯಾನ್ಸರ್ ರೋಗಿಗಳು, ಡಯಾಲಿಸ್‍ಗೆ ಒಳಗಾಗುವ ರೋಗಿಗಳು ಮತ್ತು ಕಾರ್ಟಿಕೊಸ್ಟರಾಯ್ಡ್‍ಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವವರಿಗೂ ಇದು ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ.

ಇದರ ಅಪಾಯಕಾರಿ ಅಂಶಗಳೆಂದರೆ ಆಘಾತ ಅಥವಾ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಅಂಗ ಅಥವಾ ಮೂಳೆ ಮಜ್ಜೆಯ ಕಸಿಗೆ ಒಳಗಾದವರು ಹೆಚ್ಚು ಜಾಗರೂಕರಾಗಿರಬೇಕು. ಈ ಹಿಂದೆ ಕೋವಿಡ್-19 ಸೋಂಕನ್ನು ಹೊಂದಿದ್ದರೆ ಮತ್ತು ಸ್ಟಿರಾಯ್ಡ್ ಅಥವಾ ರೆಮೆಡಿಸಿವಿರ್​ನೊಂದಿಗೆ ಚಿಕಿತ್ಸೆ ಪಡೆದಿದ್ದರೆ ಅಥವಾ ಆಕ್ಸಿಜನ್‍ನೊಂದಿಗೆ ಚಿಕಿತ್ಸೆ ಪಡೆದಿದ್ದ ರೋಗಿಗಳು ವಿಶೇಷವಾಗಿ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಸುಲಭವಾಗಿ ಹರಡುವ ಜಾಗ ಯಾವುದು?

ಮೂಗಿನ ಸುತ್ತ ಇರುವ ಮೂಳೆಗಳಲ್ಲಿನ ಸಣ್ಣ ಟೊಳ್ಳಾದ ಭಾಗಗಳು(ಪ್ಯಾರಾನಾಸಲ್ ಸೈನಸ್‍ಗಳು), ನಸಲ್ ಕ್ಯಾವಿಟಿ, ಅಂಗುಳ, ಸ್ಕಲ್ ಬೇಸ್ ಮತ್ತು ಗಂಟಲಿನ ಹಿಂಭಾಗ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಈ ಕಪ್ಪು ಶಿಲೀಂಧ್ರ ಸೋಂಕು ಸುಲಭವಾಗಿ ಹರಡುತ್ತದೆ.

ಕ್ರಮೇಣ ಕಣ್ಣುಗಳು ಮತ್ತು ಮೆದುಳನ್ನೂ ಆವರಿಸಿಕೊಳ್ಳಬಹುದು. ಈ ಸೋಂಕು ಆವರಿಸಿಕೊಳ್ಳುವ ಇತರ ಭಾಗಗಳೆಂದರೆ ಚರ್ಮ, ಶ್ವಾಸಕೋಶಗಳು ಮತ್ತು ಜೀರ್ಣಾಂಗ ವ್ಯೂಹಗಳು. ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು, ಪಫಿನೆಸ್ ಅಥವಾ ಊತ, ಕಣ್ಣಿನ ನೋವು, ಕಣ್ಣುಗಳ ಸುತ್ತಲೂ ಪಫಿನೆಸ್, ದೃಷ್ಟಿ ಮಸುಕಾಗುವುದು ಅಥವಾ ಮೂಗು ಕಟ್ಟಿಕೊಳ್ಳುವುದರೊಂದಿಗೆ ತಲೆನೋವು, ಹಲ್ಲುನೋವು, ಅಂಗುಳಲ್ಲಿ ಊತ ಕಾಣಿಸಿಕೊಳ್ಳುವುದು ಸೇರಿದಂತೆ ಇನ್ನಿತರ ಭಾಗಗಳಿಗೆ ಹರಡುವ ಸಾಧ್ಯತೆಗಳಿವೆ ಅಂತ ತಿಳಿಸಿದರು.

ABOUT THE AUTHOR

...view details