ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರ ನಾಳೆ ರಾತ್ರಿಯಿಂದ ಒಂದು ವಾರ ಲಾಕ್ ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಎರಡೂ ಜಿಲ್ಲೆಗಳ ಭೌತಿಕ ಕೋರ್ಟ್ ಕಲಾಪವನ್ನು ಲಾಕ್ ಡೌನ್ ಮುಗಿಯುವವರೆಗೂ ಸ್ಥಗಿತಗೊಳಿಸಿ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಈ ಕುರಿತು ನೋಟಿಸ್ ಹೊರಡಿಸಿದ್ದಾರೆ. ಅದರಂತೆ, ಈ ಅವಧಿಯಲ್ಲಿ ಫಿಸಿಕಲ್ ಫೈಲಿಂಗ್ ರದ್ದಾಗಿರಲಿದ್ದು, ವಕೀಲರು ಮತ್ತು ಕಕ್ಷಿದಾರರು ಇ-ಮೇಲ್ ಮೂಲಕ ತುರ್ತು ಪ್ರಕರಣಗಳನ್ನಷ್ಟೇ ದಾಖಲಿಸಬಹುದಾಗಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಸಿಎಂಎಂ ನ್ಯಾಯಾಧೀಶರ ಇ-ಮೇಲ್ ವಿಳಾಸಕ್ಕೆ ಮನವಿ ಸಲ್ಲಿಸಿದರೆ, ಅವುಗಳನ್ನು ಪರಿಶೀಲಿಸಿ ತುರ್ತು ವಿಚಾರಣೆ ಅಗತ್ಯವಿದ್ದರಷ್ಟೇ ಕೋರ್ಟ್ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುತ್ತದೆ.