ಬೆಂಗಳೂರು :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಮಾ.21 ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತಸುಬ್ಬರಾವ್ ಅವರು ತಿಳಿಸಿದರು. ಭಾನುವಾರ ಅನಂತಸುಬ್ಬರಾವ್ ಅವರು ಸೇರಿದಂತೆ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನೌಕರರ ವೇತನವನ್ನು ಶೇ.15ಕ್ಕೆ ಏರಿಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ವಿಮರ್ಶೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 21 ರ ಬೆಳಗ್ಗೆ 6 ಗಂಟೆಯಿಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಕಟಿಸಿತ್ತು. 2023 ರ ಮಾರ್ಚ್ 8 ರಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಜೊತೆ ವೇತನ ಪರಿಷ್ಕರಣೆ ಕುರಿತು ಚರ್ಚಿಸಲಾಗಿದ್ದು, ಆದರೆ ಮೂಲ ವೇತನದ ಶೇ.10 ರಷ್ಟು ಹೆಚ್ಚಳದ ಭರವಸೆಗೆ ನಮ್ಮ ಸಮ್ಮತಿ ಇಲ್ಲದ ಕಾರಣ ಮತ್ತೊಮ್ಮೆ ಸಭೆ ನಡೆಸುವ ಆಶ್ವಾಸನ ನೀಡಲಾಗಿತ್ತು. ಆದರೆ ಸರ್ಕಾರ ನಮ್ಮ ಬೇಡಿಕೆಗಳ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳ ಕಾಣುತ್ತಿಲ್ಲ. ಅಲ್ಲದೆ ಚುನಾವಣೆ ಆರಂಭದ ಹೊಸ್ತಿಲಿನಲ್ಲಿದ್ದೇವೆ. ಚುನಾವಣಾ ಆಯುಕ್ತರು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಚುನಾವಣೆಯ ಪ್ರಕಟಣೆಯಾದರೆ ಸಾರಿಗೆ ನೌಕರರು ತಮ್ಮ ಬೇಡಿಕೆಗಳೆಲ್ಲಾ ಅನಿರ್ದಿಷ್ಟವಾಧಿಗೆ ನೆನೆಗುದಿಗೆ ಬೀಳಬಹುದೆಂಬ ಭೀತಿಯಲ್ಲಿದ್ದ ಸಾರಿಗೆ ನೌಕರರು ಆಕ್ರೋಶ ಹೊರಹಾಕಿ ಮುಷ್ಕರಕ್ಕೆ ಕರೆಕೊಟ್ಟಿದ್ದರು.
ಈ ವಿಚಾರವಾಗಿ ಮಾತನಾಡಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತಸುಬ್ಬರಾವ್ ಅವರು, ನೌಕರರ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ ಮೇರೆಗೆ ಮುಷ್ಕರ ವಾಪಸ್ ಪಡೆಯಲಾಗಿದೆ. ವೇತನ ಹೆಚ್ಚಳ ಹಾಗೂ ಭತ್ಯೆ ಸೇರಿದಂತೆ ಉಳಿದ ಎಲ್ಲ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆ ಜೊತೆಗೆ ನಿಗಮ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಹಿಂದಿನ ಬಾಕಿ ಪಾವತಿ ಭರವಸೆ :ಪ್ರತಿ 5 ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಲಾಗುತ್ತದೆ. ಆದರೆ, ಕಳೆದ 3 ವರ್ಷಗಳಿಂದ ವೇತನ ಹೆಚ್ಚಳ ವಿಷಯ ನನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಶೇ.15 ರಷ್ಟು ವೇತನ ಹೆಚ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಹಿಂದಿನ ಬಾಕಿ ಪಾವತಿ ವಿಚಾರದಲ್ಲಿ ಸಂಘಟನೆಗಳ ಮಾಹಿತಿ ಪಡೆಯುವ ಭರವಸೆ ಸಿಕ್ಕಿದೆ ಎಂದು ಅನಂತಸುಬ್ಬರಾವ್ ಅವರು ಮಾಹಿತಿ ನೀಡಿದರು.