ಬೆಂಗಳೂರು:ಚಿತ್ರದುರ್ಗದ ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಡ್ವೊಕೇಟ್ ಜನರಲ್ ಕಚೇರಿ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠದ ತೀರ್ಪಿನಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳು ಕಂಡುಬರುತ್ತಿಲ್ಲ. ಹೀಗಾಗಿ ಸರ್ಕಾರ ಮೇಲ್ಮನವಿ ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ಅಡ್ವೋಕೇಟ್ ಜನರಲ್ ಕಚೇರಿಯಿಂದ ಕಂದಾಯ ಇಲಾಖೆಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?:ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅಂದಿನ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ವಸ್ತ್ರದ 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು.
ರಾಜ್ಯ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು, ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಸಂವಿಧಾನದ 169ನೇ ವಿಧಿಯ ಅನುಸಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ. ಅಂತೆಯೇ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988ರ ಕಲಂ 8 (2)ರಡಿ ಶರಣರು ತಮ್ಮ ಅಧಿಕಾರ ಚಲಾಯಿಸಲು ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಕಾನೂನು ಬಾಹಿರ. ಆದ್ದರಿಂದ, ಈ ಆದೇಶಗಳನ್ನು ವಜಾಗೊಳಿಸಬೇಕು ಎಂದು ಪ್ರತ್ಯೇಕವಾಗಿ ಕೋರಿದ್ದರು.
ಈ ಎರಡೂ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದ ಕ್ರಮವನ್ನು ರದ್ದುಪಡಿಸಿತ್ತು. ಅಂತೆಯೇ, ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶವನ್ನೂ ವಜಾಗೊಳಿಸಿ, ''ಮಠ ಮಾನ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು'' ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ-1992ಕ್ಕೆ ರಾಜ್ಯ ಸರ್ಕಾರ 2011ರಲ್ಲೇ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಅನುಸಾರ ಯಾವುದೇ ಮಠ, ಮಠಕ್ಕೆ ಹೊಂದಿಕೊಂಡ ದೇಗುಲಗಳನ್ನು ಶಾಸನದಿಂದ ಹೊರಗಿಡಲಾಗಿದೆ. ಈ ಕುರಿತ ತಿದ್ದುಪಡಿಯನ್ನು ಸುಪ್ರೀಂ ಕೋರ್ಟಿಗೂ ಸಲ್ಲಿಸಲಾಗಿದೆ ಎಂಬ ಅಂಶವನ್ನು ತೀರ್ಪಿನಲ್ಲಿ ಕಾಣಿಸಿದ್ದ ನ್ಯಾಯಪೀಠ, ಸರ್ಕಾರವು ಮಠದ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಬರುವುದಿಲ್ಲ. ಶಾಸನಯುಕ್ತ ಅಧಿಕಾರ ಇದ್ದರೆ ಮಾತ್ರವೇ ಮಧ್ಯಪ್ರವೇಶ ಮಾಡಬಹುದು ಎಂದು ಹೇಳಲಾಗಿತ್ತು. ಇದೀಗ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಡ್ವೋಕೇಟ್ ಜನರಲ್ ಕಚೇರಿ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ:ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಡಿಕೆಶಿ ಮೇಲ್ಮನವಿ... ರಾಜ್ಯ ಸರ್ಕಾರ, ಸಿಬಿಐಗೆ ನೋಟಿಸ್ ಜಾರಿ