ಬೆಂಗಳೂರು :ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳವಾಗುತ್ತಿವೆ. ಜಾಗೃತಿ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಕ್ಯಾನ್ಸರ್ ದೇಹದಲ್ಲಿ ಹರಡಿ ಕೊನೆ ಹಂತದಲ್ಲಿ ಜನರು ಆಸ್ಪತ್ರೆಯ(hospital) ಕದ ತಟ್ಟುತ್ತಿದ್ದಾರೆ. ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ರೂ ಸಹ ಉಳಿಸುವ ಕೆಲಸ ಆಗುತ್ತಿಲ್ಲ ಅಂತಾ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಕ್ಯಾನ್ಸರ್ ಕುರಿತಾದ ಮಾಹಿತಿ ಕೊರತೆಯಿಂದ ನಮ್ಮ ದೇಶದಲ್ಲಿ ಶೇ.40ರಿಂದ 50 ರಷ್ಟು ಜನ ಚಿಕಿತ್ಸೆಗೆ ತಡವಾಗಿ ಬರುತ್ತಿದ್ದಾರೆ. ಪರಿಣಾಮ ಶೇ. 50 ರಿಂದ 55ರಷ್ಟು ಜನ ಕ್ಯಾನ್ಸರ್(cancer) ಮೂರು ಅಥವಾ ನಾಲ್ಕನೇ ಹಂತದಲ್ಲಿದ್ದಾಗ ಬರುತ್ತಿದ್ದಾರೆ ಅಂತಾ ಕಿದ್ವಾಯಿ ಸಂಸ್ಥೆಯ ನಿರ್ದೇಶಕರಾದ ಡಾ. ಸಿ ರಾಮಚಂದ್ರ ಮಾಹಿತಿ ನೀಡಿದ್ದಾರೆ.
ಅದರಲ್ಲೂ ಮಹಿಳೆಯರಲ್ಲೇ ಕ್ಯಾನ್ಸರ್ (cancer in women)ಹೆಚ್ಚು ಪತ್ತೆಯಾಗುತ್ತಿದೆ. ಗರ್ಭಕೋಶದ ಕಂಟಕದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ 1.5 ಲಕ್ಷ ರೂಪಾಯಿ ಖರ್ಚು ಆಗುತ್ತೆ. ಇತ್ತ ಪಕ್ಕದ ಸಿಕ್ಕಿಂನಲ್ಲಿ ಕ್ಯಾನ್ಸರ್ ರೋಗ ಬಾರದಂತೆ ತಡೆಯಲು 9 ರಿಂದ 15 ವರ್ಷದ ಹೆಣ್ಣು ಮಕ್ಕಳಿಗೆ ಕ್ಯಾನ್ಸರ್ ಲಸಿಕೆ ನೀಡಲಾಗುತ್ತಿದೆ.
ಒಬ್ಬರಿಗೆ ಎರಡು ಡೋಸ್ ನೀಡಲಾಗುತ್ತಿದೆ. ರಾಜ್ಯದಲ್ಲೂ ಲಸಿಕೆ ನೀಡಿದರೆ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ ಅಂತಾ ತಿಳಿಸಿದ್ದಾರೆ. ಲಸಿಕೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಗಾರ್ಡ್ ಸಿಲ್ಲಾ, ಸರ್ವಾರಿಕ್ಷಾ ಎಂಬ ಲಸಿಕೆ ಇದಾಗಿದೆ. ರಾಜ್ಯದಲ್ಲಿ ಒಟ್ಟು 30 ಲಕ್ಷ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಿದರೆ ಕ್ಯಾನ್ಸರ್‌ಗೆ ಕಡಿವಾಣ ಹಾಕಬಹುದಾಗಿದೆ. ಲಸಿಕೆ ನೀಡುವುದರಿಂದ ಚಿಕಿತ್ಸೆಗೆ ತಗಲುವ ವೆಚ್ಚದ ಹೊರೆ ಸರ್ಕಾರಕ್ಕೆ ಕಡಿಮೆಯಾಗಲಿದೆ ಅಂತಾ ವಿವರಿಸಿದರು.
ಮದ್ಯಸೇವನೆ ಮತ್ತು ಧೂಮಪಾನವೇ ಮಾರಕ :ಮದ್ಯಸೇವನೆ ಮತ್ತು ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ. 2019ರಲ್ಲಿ ಕಿದ್ವಾಯಿಯಲ್ಲಿ 122 ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಗಿದೆ. ಅದರಲ್ಲಿ ಶೇ.1ರಷ್ಟು ಮಂದಿಯಲ್ಲಿ ಮಾತ್ರ ಕ್ಯಾನ್ಸರ್ ಪತ್ತೆಯಾಗಿದೆ. ತಪಾಸಣೆ ಮಾಡಿಸಿಕೊಳ್ಳಲು ಜನ ಮುಂದೆ ಬರುತ್ತಿಲ್ಲ. ಕ್ಯಾನ್ಸರ್ ಇದೆ ಎಂದು ಗೊತ್ತಿದ್ದರೂ ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ಶೇ.10-15ರಷ್ಟು ಮಂದಿ ಮಾತ್ರ ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿದ್ದಾಗ ಚಿಕಿತ್ಸೆಗೆ ಬರುತ್ತಿದ್ದಾರೆಂದು ಮಾಹಿತಿ ನೀಡಿದರು.
ಮಾರಕ ಕ್ಯಾನ್ಸರ್‌ಗೆ ತಂಬಾಕು ಶೇ.40 ಹಾಗೂ ಶೇ.20 ಒತ್ತಡ ಹಾಗೂ ಚಟುವಟಿಕೆ ರಹಿತ ಮತ್ತು ಬದಲಾದ ಜೀವನ ಶೈಲಿ ಕಾರಣವಾದರೆ, ಶೇ.20 ವಂಶವಾಹಿನಿಯಿಂದ ಹಾಗೂ ಶೇ.20 ನಿರ್ದಿಷ್ಟ ಕಾರಣವೇನೆಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, ಕ್ಯಾನ್ಸರ್ ಬಾರದಂತೆ ತಡೆಯಲು ಉತ್ತಮ ಜೀವನ ಶೈಲಿ(good life style) ಅಳವಡಿಸಿಕೊಳ್ಳಬೇಕು.
ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ, ದೇಹಕ್ಕೆ ಅಗತ್ಯವಾದಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯುವುದು ಹಾಗೂ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಮೂಲ್ಯವಾದ ಸಮಯ ಕಳೆಯವುದು ಒಂದಾದರೆ, ಇವೆಲ್ಲವನ್ನೂ ಪಾಲಿಸಿಯೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಎಚ್ಚರವಹಿಸಿವುದೂ ಅಗತ್ಯ. ನಿಯಮಿತ ಆರೋಗ್ಯ ತಪಾಸಣೆಯಿಂದ ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಗುಣಹೊಂದಬಹುದು ಎಂದರು.
ಕರ್ನಾಟಕದಲ್ಲಿ ಕ್ಯಾನ್ಸರ್ ಅಂಕಿಅಂಶ ಹೀಗಿವೆ:
- 78,381 ಹೊಸ ಕ್ಯಾನ್ಸರ್ ಪ್ರಕರಣಗಳು
- 1,74,000 ಪ್ರಚಲಿತ ಕ್ಯಾನ್ಸರ್ ಪ್ರಕರಣಗಳು
- 43,639 ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳು
- 9,837 ಸ್ತನ ಕ್ಯಾನ್ಸರ್ ಪ್ರಕರಣಗಳು (ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳಲ್ಲಿ 22%)
- 26,560 ಪ್ರಚಲಿತ ಸ್ತನ ಕ್ಯಾನ್ಸರ್ ಪ್ರಕರಣಗಳು